ವಿಜಯಪುರ: ಕಳೆದ 12 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಖತರ್ನಾಕ್ ನಕಲಿ ಡಿವೈಎಸ್ಪಿ ಇದೀಗ ವಿಜಯಪುರದ ಎಪಿಎಂಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಜ್ಞಾನಗೌಡ ಪಾಟೀಲ್ ಅಲಿಯಾಸ್ ಸಿ. ಸಂಪತ್ಗೌಡ ಬಂಧಿತ ಆರೋಪಿಯಾಗಿದ್ದು, ಈತನನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಜ್ಞಾನಗೌಡ 2012 ರಿಂದಲೇ ಹಲವು ಜಿಲ್ಲೆಗಳಲ್ಲಿ ಜನರಿಗೆ ಮೋಸ ಮಾಡುತ್ತಾ ಬಂದಿದ್ದ. ಪೊಲೀಸ್, ರೈಲ್ವೆ, ಬಂದಿಖಾನೆ, ಕಂದಾಯ, ಮತ್ತು ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಾಕಷ್ಟು ಜನರಿಂದ ಹಣ ಸುಲಿಗೆ ಮಾಡಿದ್ದ. ಅಷ್ಟೇ ಅಲ್ಲದೆ, ಆಗಾಗ್ಗೆ ತನ್ನ ಹೆಸರು, ಮೊಬೈಲ್ ಸಿಮ್ ಕಾರ್ಡ್ ಹಾಗೂ ಲೊಕೇಶನ್ ಬದಲಾಯಿಸಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಈತನ ವಿರುದ್ಧ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು.
2014 ರಲ್ಲಿ ನೌಕರಿ ಕೊಡಿಸುವುದಾಗಿ ಪಡೆದಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಯುವಕನೊಬ್ಬನ ಕೈಗೆ ಬೇಡಿ ಹಾಕಿ ಕಾಲುವೆಗೆ ತಳ್ಳಿ ಹತ್ಯೆಗೂ ಯತ್ನಿಸಿದ ಗಂಭೀರ ಆರೋಪ ಈತನ ಮೇಲಿದೆ. ಇಷ್ಟೆಲ್ಲಾ ಪ್ರಕರಣಗಳು ದಾಖಲಾದ ಬಳಿಕವೂ ತಲೆಮರೆಸಿಕೊಂಡಿದ್ದ ಈತ, ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಮತ್ತೆ ತನ್ನ ವಂಚನೆ ಜಾಲವನ್ನು ವಿಸ್ತರಿಸಲು ಮುಂದಾಗಿದ್ದ. ಪೊಲೀಸ್ ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ದೋಚಲು ಸಜ್ಜಾಗಿದ್ದಾಗ ಪಕ್ಕಾ ಮಾಹಿತಿ ಕಲೆಹಾಕಿದ ವಿಜಯಪುರ ಎಪಿಎಂಸಿ ಪೊಲೀಸರು, ಕೊನೆಗೂ 12 ವರ್ಷಗಳ ಹೈಡ್ರಾಮಾಗೆ ತೆರೆ ಎಳೆದು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

Leave a Reply