ವಿವಾಹಿತ 40 ವರ್ಷದ ತನ್ನದೇ ಧರ್ಮಗುರುವಿನ ಜೊತೆ ತೆರಳಿದ 22 ವರ್ಷದ ಕುಮಟಾದ ಯುವತಿ: ಪೊಲೀಸ್ ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!

ಹಂಚಿಕೊಳ್ಳಿ

ಕುಮಟಾ- ಮಂಗಳೂರು : ಹೆತ್ತು, ಹೊತ್ತು, ಸಾಕಿ ಸಲಹಿದ ಹೆತ್ತವರ ಪ್ರೀತಿ, ಮಮತೆ, ಮತ್ತು ಕುಟುಂಬದ ಗೌರವ ಎಲ್ಲವನ್ನೂ ಮರೆತು, 22 ವರ್ಷದ ಯುವತಿಯೊಬ್ಬಳು ಈಗಾಗಲೇ ಮದುವೆಯಾಗಿ ಮಕ್ಕಳಿರುವ 40 ವರ್ಷದ ಮುಸ್ಲಿಂ ಧರ್ಮಗುರುವಿನ ಜೊತೆ ಓಡಿಹೋಗಿರುವ ಘಟನೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಈ ಘಟನೆ, ಹೆತ್ತವರ ಕರುಳನ್ನು ಹಿಂಡುವಂತೆ ಮಾಡಿದೆ.

ಕುಮಟಾದ ಬೆಟಗುಳಿ ನಿವಾಸಿಯ ವ್ಯಕ್ತಿಯೊಬ್ಬರ ಪುತ್ರಿ ಮಗದುಮ್ಮ  (22), ಮಂಗಳೂರಿನ ಅಸೈಗೋಳಿ ನಿವಾಸಿ, ಧರ್ಮಗುರು ಅಶ್ರಫ್ ಸ ಅದಿ ಎಂಬಾತನ ಪ್ರೇಮಪಾಶಕ್ಕೆ ಬಿದ್ದಿದ್ದಾಳೆ. ಅಶ್ರಫ್ ಸ ಅದಿ ಕುಮಟಾದ ಮದ್ರಸಾವೊಂದರಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದಾಗ ಇವರಿಬ್ಬರ ನಡುವೆ ಸಂಪರ್ಕ ಬೆಳೆದಿತ್ತು. ಆತನಿಗೆ ಈಗಾಗಲೇ ಮದುವೆಯಾಗಿ, ಮಕ್ಕಳ ಸಂಸಾರವಿದ್ದರೂ, ಆತನ ಮಾತುಗಳಿಗೆ ಮರುಳಾದ ಯುವತಿ ತನ್ನ ಹೆತ್ತವರನ್ನು ತೊರೆದು ಆತನ ಜೊತೆ ಓಡಿ ಬಂದಿದ್ದಾಳೆ.

ಮಗಳು ನಾಪತ್ತೆಯಾದ ದುಃಖದಲ್ಲಿ, ಆಕೆಯನ್ನು ಹುಡುಕಿಕೊಂಡು ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಗೆ ಬಂದ ಪೋಷಕರು ಮತ್ತು ಕುಟುಂಬಸ್ಥರು ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ಯುವತಿ ವಯಸ್ಕಳಾಗಿರುವ ಕಾರಣ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಈ ಸಂದರ್ಭದಲ್ಲಿ ಠಾಣೆಯ ಆವರಣದಲ್ಲಿ ಅತ್ಯಂತ ಕರುಣಾಜನಕ ದೃಶ್ಯಗಳು ಕಂಡುಬಂದವು. ವೃದ್ಧ ತಂದೆ-ತಾಯಿ, ಸಹೋದರ ಮತ್ತು ಸಂಬಂಧಿಕರು ಯುವತಿಯ ಕಾಲಿಗೆ ಬಿದ್ದು, “ಮಗಳೇ ಮನೆಗೆ ಬಾ, ನಮ್ಮ ಮಾನ ಕಳೆಯಬೇಡ” ಎಂದು ಕೈಮುಗಿದು, ಕಾಡಿ ಬೇಡಿಕೊಂಡರು. ಆದರೆ, ಹೆತ್ತವರ ಕಣ್ಣೀರಿಗೆ ಕರಗದ ಯುವತಿ, ತನ್ನನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ ಕುಟುಂಬಸ್ಥರನ್ನು ಕ್ಯಾರೇ ಎನ್ನದೆ, 40 ವರ್ಷದ ವಿವಾಹಿತ ಧರ್ಮಗುರುವಿನ ಜೊತೆಯೇ ಹೋಗುವುದಾಗಿ ಹಠ ಹಿಡಿದಿದ್ದಾಳೆ.

ಕೊನೆಗೆ ಹೆತ್ತವರ ಎದುರಲ್ಲೇ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿ, ಧರ್ಮಗುರುವಿನ ಕೈ ಹಿಡಿದು ಯುವತಿ ಹೊರಟುಹೋಗಿದ್ದಾಳೆ. ಕಣ್ಣೆದುರೇ ಮಗಳು ಪರಪುರುಷನ ಜೊತೆ ಹೋಗುತ್ತಿರುವುದನ್ನು ಕಂಡು ಅಸಹಾಯಕರಾದ ತಂದೆ ತಾಯಿ, ಠಾಣೆಯ ಅಂಗಳದಲ್ಲೇ ಬಿಕ್ಕಿ ಬಿಕ್ಕಿ ಅತ್ತು ಉರುಳಾಡಿದ್ದಾರೆ. ಹೆತ್ತ ಕರುಳಿನ ಈ ರೋದನ ಅಲ್ಲಿದ್ದವರ ಕಣ್ಣುಗಳನ್ನೂ ಒದ್ದೆಯಾಗಿಸುವಂತಿತ್ತು. ಪ್ರೀತಿ ಎಂಬ ಮೋಹಕ್ಕೆ ಬಿದ್ದು ಹೆತ್ತವರ ಕಣ್ಣೀರಿಗೆ ಕಾರಣವಾದ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *