ಮೂರು ಬಿಟ್ಟ ಯಲ್ಲಾಪುರ  ಪಟ್ಟಣ ಪಂಚಾಯತ ಅಧಿಕಾರಿಗಳು ?  ಕಂಡಕಂಡಲ್ಲಿ ಮೀನು ಮಾರಾಟ. ರೋಗ ಭೀತಿಯಲ್ಲಿ  ಯಲ್ಲಾಪುರ ಪಟ್ಟಣಿಗರು…..

ಹಂಚಿಕೊಳ್ಳಿ

ಯಲ್ಲಾಪುರ: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ನಿಯಮ ಗಾಳಿಗೆ ತೂರಿ ಹಲವು ಕಡೆಗಳಲ್ಲಿ ಬೇಕಾಬಿಟ್ಟಿ ಮೀನು ಮಾರಾಟ ನಡೆಸುತ್ತಿರುವುದು ಸಾರ್ವಜನಿಕರಿಗೆ ತೀರಾ ತೊಂದರೆ ಉಂಟುಮಾಡುತ್ತಿದೆ. ಪಟ್ಟಣದ ಪ್ರಮುಖ ಜಂಕ್ಷನ್ ಆಗಿರುವ ತಟಗಾರ ಕ್ರಾಸ್ ಬಳಿ ಪ್ರತಿನಿತ್ಯ ಬೆಳಿಗ್ಗೆಯೇ ನಾಲ್ಕೈದು ಮೀನು ಮಾರಾಟದ ಅಂಗಡಿಗಳನ್ನು ರಸ್ತೆ ಬದಿಯಲ್ಲೇ ಹಾಕಲಾಗುತ್ತಿದ್ದು, ಇದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ಪ್ರತಿದಿನ ಪರದಾಡುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಸಜ್ಜಿತ ಮಾರುಕಟ್ಟೆ ಇದ್ದರೂ ರಸ್ತೆ ಬದಿಯೇ ಆಸರೆ!

ನಿಜ ಪ್ರಸಂಗವೆಂದರೆ, ಪಟ್ಟಣದಲ್ಲಿ ಮೀನು ವ್ಯಾಪಾರಕ್ಕಾಗಿಯೇ ಬಸ್ ನಿಲ್ದಾಣದ ಪಕ್ಕದಲ್ಲೇ ಒಂದು ಸುಸಜ್ಜಿತವಾದ ಮೀನು ಮಾರುಕಟ್ಟೆ ಇದೆ. ಪಟ್ಟಣ ಪಂಚಾಯತ್ ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲಕ್ಷಾಂತರ ರೂಪಾಯಿ ನೀಡಿ ಅಧಿಕೃತವಾಗಿ ಅಂಗಡಿಗಳನ್ನು ಖರೀದಿಸಿದ ಪ್ರಾಮಾಣಿಕ ವ್ಯಾಪಾರಿಗಳು ಅಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲವರು ಯಾವುದೇ ಅನುಮತಿ ಇಲ್ಲದೆ ರಸ್ತೆ ಬದಿಗಳಲ್ಲಿ ಅಂಗಡಿ ಇಡುತ್ತಿರುವುದು ಅಧಿಕೃತ ವ್ಯಾಪಾರಿಗಳಿಗೂ ಅನ್ಯಾಯ ಮಾಡಿದಂತಾಗಿದೆ. ಒಂದು ವೇಳೆ ಮೀನು ಮಾರಾಟಕ್ಕೆ ಜಾಗದ ಅವಶ್ಯಕತೆ ಇದ್ದಲ್ಲಿ ಮತ್ತೊಂದು ಸುಸಜ್ಜಿತ ಜಾಗವನ್ನು ಟೆಂಡರ್ ಕರೆದು ಮೀನು ಮಾರಾಟಗಾರರಿಗೆ ನೀಡಲಿ. ಅದನ್ನು ಬಿಟ್ಟು ಕಂಡಕಂಡಲ್ಲಿ ಮೀನು ಮಾರಾಟ ನಡೆಸಿ ಆ ಪ್ರದೇಶ ಗಬ್ಬೆಳುವಂತೆ ಮಾಡುದೆಷ್ಟು ಸರಿ?

ಪಟ್ಟಣ ಪಂಚಾಯತ್ ಆದಾಯಕ್ಕೆ ಕತ್ತರಿ ಭೀತಿ!

ಸಾವಿರಾರು ರೂಪಾಯಿ ಕೊಟ್ಟು ಮಾರುಕಟ್ಟೆಯಲ್ಲಿ ಅಂಗಡಿ ಪಡೆದ ವ್ಯಾಪಾರಿಗಳು ಕೂಡ ನಾಳೆಯ ದಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು, ರಸ್ತೆ ಬದಿಯಲ್ಲೇ ಕಂಡ ಕಂಡಲ್ಲಿ ಮೀನು ಮಾರಾಟ ಮಾಡಲು ಪ್ರಾರಂಭಿಸಿದರೆ ಪಟ್ಟಣ ಪಂಚಾಯತ್‌ನ ಆದಾಯದ ಗತಿ ಏನು? ಎಂಬ ಪ್ರಶ್ನೆ ಮೂಡಿದೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಷ್ಟೇ ಅಲ್ಲ, ಸ್ಥಳೀಯ ಆಡಳಿತದ ತೇಜಸ್ಸು ಮತ್ತು ಆದಾಯಕ್ಕೆ ದೊಡ್ಡ ಹೊಡೆತ ನೀಡುವ ವಿಷಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ಗಮನ ಹರಿಸುವುದು ತೀರಾ ಅನಿವಾರ್ಯವಾಗಿದೆ.

ಗಬ್ಬುನಾರುತ್ತಿರುವ ಪರಿಸರ: ರೋಗಭೀತಿ

ಅನಧಿಕೃತ ಮೀನು ಮಾರಾಟಗಾರರು ವ್ಯಾಪಾರ ಮುಗಿದ ನಂತರ ಮೀನಿನ ತ್ಯಾಜ್ಯ ಹಾಗೂ ಕಸವನ್ನು ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲೇ ಬಿಸಾಡುತ್ತಿದ್ದಾರೆ. ಇದರಿಂದಾಗಿ ಇಡೀ ಪರಿಸರ ಗಬ್ಬುನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೊಳೆತ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಸ್ಥಳೀಯ ನಿವಾಸಿಗಳ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ.

ಟ್ರಾಫಿಕ್ ಜಾಮ್ ಹಾಗೂ ಸಾರ್ವಜನಿಕರ ಗಲಾಟೆ

ಮುಖ್ಯ ರಸ್ತೆಯ ಇಕ್ಕೆಲಗಳಲ್ಲೇ ವ್ಯಾಪಾರ ನಡೆಯುತ್ತಿರುವುದರಿಂದ, ಮೀನು ಖರೀದಿಸಲು ಬರುವ ಗ್ರಾಹಕರು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ರಸ್ತೆಯ ಮೇಲೆಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದಾಗಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇತರೆ ವಾಹನಗಳು ಒಂದು ಕಡೆಯಿಂದ ಮತ್ತೊಂದೆಡೆ ಸಾಗಲು ತೊಂದರೆಯಾಗುತ್ತಿದೆ. ಇದೇ ಕಾರಣಕ್ಕೆ ಸವಾರರ ನಡುವೆ ಪ್ರತಿದಿನ ಮಾತಿನ ಚಕಮಕಿ ಹಾಗೂ ಗಲಾಟೆಗಳು ಸಾಮಾನ್ಯ ಎಂಬಂತಾಗಿದೆ.

ಗಾಢ ನಿದ್ರೆಯಲ್ಲಿ ಪಟ್ಟಣ ಪಂಚಾಯತ್!

ಈ ಹಿಂದೆ ಪಟ್ಟಣ ಪಂಚಾಯತ್ ಸದಸ್ಯರು ಕೂಡ ಸಾಮಾನ್ಯ ಸಭೆಗಳಲ್ಲಿ ಹಲವು ಬಾರಿ ಈ ಅಕ್ರಮ ಮೀನು ಮಾರಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೂ ಸಹ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಹಿಂದೆ ಪಟ್ಟಣದ ಜೊಡಕೇರೆ ಸಮೀಪದ ಹಾಗೂ ಇನ್ನಿತರ ಕಡೆಗಳಲ್ಲಿ ಈ ಹಿಂದೆ ಮೀನು ಮಾರಾಟ ಮಾಡುತ್ತಿದ್ದರು‌. ಈಗ ತಟಗಾರ್ ಕ್ರಾಸ್ ಸಮೀಪ ಮತ್ತೆ ಇದೆ ರೀತಿ ಮೀನು ಮಾರಾಟ ಪ್ರಾರಂಭವಾಗಿದ್ದು  ಇದೇ ರೀತಿ ಗಾಢ ನಿದ್ರೆಯಲ್ಲಿದ್ದರೆ, ಇಡೀ ಯಲ್ಲಾಪುರ ಪಟ್ಟಣವೇ ಮುಂದಿನ ದಿನಗಳಲ್ಲಿ ಅನಧಿಕೃತ ಮೀನು ಮಾರಾಟ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಗರಿಕರ ತೀವ್ರ ಒತ್ತಾಯ:

ಕೂಡಲೇ ಪಟ್ಟಣ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ತಟಗಾರ ಕ್ರಾಸ್ ಸೇರಿದಂತೆ ಪಟ್ಟಣದ ರಸ್ತೆ ಬದಿಗಳಲ್ಲಿ ನಡೆಸಲಾಗುತ್ತಿರುವ ಅನಧಿಕೃತ ಮೀನು ಮಾರಾಟವನ್ನು ತಡೆಗಟ್ಟಬೇಕು. ಬಸ್ ನಿಲ್ದಾಣದ ಪಕ್ಕದಲ್ಲಿರುವ ಸುಸಜ್ಜಿತ ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆ ಮೂಲಕ ಪಟ್ಟಣದ ಸ್ವಚ್ಛತೆ, ಸುಗಮ ಸಂಚಾರ ಹಾಗೂ ಆಡಳಿತದ ಆದಾಯವನ್ನು ಉಳಿಸಬೇಕು.

Leave a Reply

Your email address will not be published. Required fields are marked *