21-7-2026 ಮಂಗಳವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.
ಕರಾವಳಿಯ ಉ.ಕ, ಉಡುಪಿ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿತ್ತು. ಮಲೆನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದ್ದು ಬೀದರ್ ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಒಳನಾಡಿನ ಉಳಿದ ಜಿಲ್ಲೆಗಳ ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆಯಾಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಬೆಳಿಗ್ಗೆ ಮಳೆ ಪ್ರಮಾಣ ಕಡಿಮೆ ಆದರೂ ನಂತರ ಆಗಾಗ ಸಾಮಾನ್ಯ ಮಳೆಯಾಗಬಹುದು. ಉಡುಪಿ ಉ.ಕ ಕರಾವಳಿ ತೀರಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದ್ದು ಉಳಿದ ತಾಲ್ಲೂಕುಗಳಲ್ಲಿ ಸಾಮಾನ್ಯ ಮಳೆಯಾಗಬಹುದು. ಮಳೆ ನಿರಂತರ ಬಾರದೆ ಬಿಟ್ಟು ಬಿಟ್ಟು ಬಂದರೂ ಪ್ರತಿ 2 ದಿನಕ್ಕೊಮ್ಮೆ ಸಾಧಾರಣ ಮಳೆ ಜುಲೈ 31 ತನಕ ಮುಂದುವರೆಯಬಹುದು. ನಾಳೆ ಹಗಲು ಮಳೆ ಸಾಧ್ಯತೆ ಇದೆ.
ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ 3-4 ದಿನ ಮಳೆ ಕಡಿಮೆ ಆಗಲಿದೆ. ಮೋಡದ ವಾತಾವರಣ – ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ. ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಒಂದೆರಡು ಸಾಧಾರಣ ಮಳೆ ಮುಂದುವರೆಯಬಹುದು.
ದಕ್ಷಿಣ ಒಳನಾಡಿನ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ತುಮಕೂರು ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು – ಸಣ್ಣ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಬಹುದು.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಬೀದರ್ ಕಲ್ಬುರ್ಗಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಬಹುದು.
ಉತ್ತರ ಭಾರತದ ಸುಳಿಗಾಳಿ ತಿರುಗುವಿಕೆಯ ಕಾರಣದಿಂದ ಮಾನ್ಸೂನ್ ಟ್ರಫ್ ಮುಂದುವರೆಯಲಿದ್ದು ಜುಲೈ 23 ರ ಅಂದಾಜು ರಾಜಸ್ಥಾನದಲ್ಲಿ ಇನ್ನೊಂದು ಸರ್ಕ್ಯುಲೇಷನ್ ಆರಂಭವಾಗಬಹುದು. ಇದರ ಪ್ರಭಾವದಿಂದ ಕರ್ನಾಟಕದಲ್ಲಿ ಜುಲೈ ಕೊನೆ ವಾರವೂ ಸಾಧಾರಣ ಮುಂಗಾರು ಮುಂದುವರೆಯಬಹುದು.




Leave a Reply