Morarji Desai ಕಾಲೇಜಿಗೆ ನುಗ್ಗಿ ವಿದ್ಯಾರ್ಥಿ, ಸಿಬ್ಬಂದಿ ಮೇಲೆ ಹಲ್ಲೆ; ಪೋಷಕರ ವಿರುದ್ಧ Case

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿದೆ. ಈ ವಿಚಾರವಾಗಿ ಪೋಷಕರು ಹಾಗೂ ಇತರ ಕೆಲವರು ಅನುಮತಿಯಿಲ್ಲದೆ ಕಾಲೇಜು ಕೊಠಡಿಗೆ ನುಗ್ಗಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ: ಜುಲೈ 12ರ ಭಾನುವಾರ ರಾತ್ರಿ 10:45ರ ಸುಮಾರಿಗೆ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜುಲೈ 13ರ ಸೋಮವಾರ ಬೆಳಗ್ಗೆ 10:30 ಗಂಟೆಗೆ ಕಾಲೇಜಿನ ಪ್ರಾಂಶುಪಾಲರಾದ ಆನಂದ ಚಿಕ್ಕೋಡಿ ಅವರು ತಮ್ಮ ಸಹೋದ್ಯೋಗಿಗಳ ಸಮ್ಮುಖದಲ್ಲಿ 10ನೇ ತರಗತಿಯ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.

ಅಕ್ರಮ ಪ್ರವೇಶ ಮತ್ತು ಹಲ್ಲೆ: ಪ್ರಾಂಶುಪಾಲರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ 9ನೇ ತರಗತಿಯ ವಿದ್ಯಾರ್ಥಿ ಪಾಲಕರು ಹಾಗೂ ಅವರೊಂದಿಗಿದ್ದ ಇತರರು ಯಾವುದೇ ಪೂರ್ವಾನುಮತಿ ಪಡೆಯದೆ ಕಾಲೇಜಿನ ಕೊಠಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಒಳನುಗ್ಗಿದವರೇ ಏಕಾಏಕಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಲಾಟೆಯನ್ನು ಬಿಡಿಸಲು ಮತ್ತು ವಿದ್ಯಾರ್ಥಿಯನ್ನು ರಕ್ಷಿಸಲು ಮುಂದಾದ ಪ್ರಾಂಶುಪಾಲರು, ಕಾಲೇಜು ಸಿಬ್ಬಂದಿ ಹಾಗೂ ಇತರ ವಿದ್ಯಾರ್ಥಿಗಳ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರಾದ ಆನಂದ ಚಿಕ್ಕೋಡಿ ಅವರು ಖುದ್ದಾಗಿ ಮುಂಡಗೋಡ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ 9ನೇ ತರಗತಿ ವಿದ್ಯಾರ್ಥಿಯ ಪಾಲಕರು ಹಾಗೂ ಇತರರ ವಿರುದ್ಧ ಮುಂಡಗೋಡ ಪೊಲೀಸರು ಕಲಂ: 329(4), 115(2) ಸಹಿತ 3(5) ಮತ್ತು ಕಲಂ: 75 ಬಾಲಾಪರಾಧ ನ್ಯಾಯ ಕಾಯ್ದೆ-2015ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *