ಬೆಂಗಳೂರು ಹೊರವಲಯದ ನೆಲಮಂಗಲದ ಬಸವನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬರು ವಿಷ ಕುಡಿದು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಗೌರಿಬಿದನೂರಿನ ಬೀರಮ್ಮನಹಳ್ಳಿ ಮೂಲದ ತನುಜಾ (31) ಆತ್ಮಹ*ತ್ಯೆಗೆ ಶರಣಾದ ದುರ್ದೈವಿಯಾಗಿದ್ದಾಳೆ.
ಘಟನೆಯ ಹಿನ್ನೆಲೆ: ಯಲಹಂಕದ ಮಾಯಸಂದ್ರ ನಿವಾಸಿಯಾಗಿರುವ ರವೀಂದ್ರ ಹಾಗೂ ತನುಜಾ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರು ಧರ್ಮಸ್ಥಳದಲ್ಲಿ ರಹಸ್ಯವಾಗಿ ಲವ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಬಳಿಕ “ಸ್ವಲ್ಪ ಸಮಯ ಕಳೆಯಲಿ, ಆಮೇಲೆ ಮನೆಯಲ್ಲಿ ವಿಚಾರ ತಿಳಿಸುತ್ತೇನೆ” ಎಂದು ಹೇಳಿದ ರವೀಂದ್ರ, ತನುಜಾಳನ್ನು ಯಲಹಂಕದ ಸಿಂಗಾಪುರದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ (ಪಿಜಿ) ಇರಿಸಿದ್ದನು.

ಆತ್ಮಹ*ತ್ಯೆಗೆ ಕಾರಣವೇನು? ನಿನ್ನೆ ತನುಜಾ ತನ್ನ ಪತಿ ರವೀಂದ್ರನಿಗೆ ಕರೆ ಮಾಡಿ ತಕ್ಷಣವೇ ಮನೆಗೆ ಬರುವಂತೆ ಪಟ್ಟು ಹಿಡಿದಿದ್ದಳು. ಆದರೆ, ರವೀಂದ್ರ “ಈಗ ಬರಲು ಆಗುವುದಿಲ್ಲ, ನಾಳೆ ಬೆಳಿಗ್ಗೆ ಬರುತ್ತೇನೆ” ಎಂದು ಉತ್ತರಿಸಿದ್ದ. ಇದರಿಂದ ತೀವ್ರ ಬೇಸರಗೊಂಡು, ಸಿಟ್ಟಿಗೆದ್ದ ತನುಜಾ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಳು.
ತದನಂತರ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ ಮೆಸೇಜ್ ಮಾಡಿದ ಆಕೆ, ತಾನು ವಿಷ ಕುಡಿದಿರುವುದಾಗಿಯೂ ಮತ್ತು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತಿರುವುದಾಗಿಯೂ ತಿಳಿಸಿದ್ದಾಳೆ. ಈ ಸಂದೇಶ ನೋಡಿ ಗಾಬರಿಗೊಂಡ ರವೀಂದ್ರ ಕೂಡಲೇ ಸ್ಥಳಕ್ಕೆ ದೌಡಾಯಿಸಿ, ತನುಜಾಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾನೆ. ಆದರೆ, ಅಷ್ಟರಲ್ಲಾಗಲೇ ವಿಷ ದೇಹದಾದ್ಯಂತ ವ್ಯಾಪಿಸಿ ತನುಜಾ ಕೊನೆಯುಸಿರೆಳೆದಿದ್ದಳು.
ಈ ದುರ್ಘಟನೆಗೆ ಸಂಬಂಧಿಸಿದಂತೆ ಇದೀಗ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವೀಂದ್ರನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಹಾಗೂ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Leave a Reply