ಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿ, ಕಿಡ್ನಾಪ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 4.25 ಲಕ್ಷ ರೂ. ಸುಲಿಗೆ ಮಾಡಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್.ಟಿ. ನಗರದ ಕಾದೀರ್ ಬಂಧಿತ ಆರೋಪಿಗಳಾಗಿದ್ದಾರೆ.
ನಗರದ ಯಲಹಂಕ ಭಾಗದಲ್ಲಿ ವಾಸವಿದ್ದ ಜ್ಯೋತಿಷಿ ಮೊಹಮ್ಮದ್ ತಾರಿಕ್ ಹುಸೇನ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಪೊಲೀಸರು ಈ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆ ಆರೋಪಿ ಆರಿಫ್, ಜ್ಯೋತಿಷಿ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿ ಮನೆಗೆ ಬಂದು ಪೂಜೆ, ಶಾಂತಿ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದ. ಇದಕ್ಕಾಗಿ ಆನ್ಲೈನ್ ಮೂಲಕ 10 ಸಾವಿರ ರೂ. ಮುಂಗಡ ಹಣವನ್ನೂ ಕಳುಹಿಸಿದ್ದ. ಆದರೆ, ಕಾರಣಾಂತರಗಳಿಂದ 3 ದಿನ ಕಳೆದರೂ ಜ್ಯೋತಿಷಿ ಭೇಟಿ ನೀಡಿರಲಿಲ್ಲ. ಕಳೆದ 29 ರಂದು ತಾನಾಗಿಯೇ ಕಾರು ಕಳುಹಿಸುವುದಾಗಿ ಹೇಳಿದ ಆರೋಪಿ, ಕಾರು ಮನೆ ಬಳಿ ಬಂದಾಗ ಹೋಗುವ ಪರಿಸ್ಥಿತಿಯಲ್ಲಿ ಇರದಿದ್ದರೂ ಜ್ಯೋತಿಷಿಯನ್ನು ಬಲವಂತವಾಗಿ ಕಾರಿನಲ್ಲಿ ತುಂಬಿಕೊಂಡು ಕಿಡ್ನಾಪ್ ಮಾಡಿದ್ದ. ತುಮಕೂರು ಹೊರವಲಯಕ್ಕೆ ಕರೆದೊಯ್ದು ಕಾರಿನಿಂದ ಇಳಿಸಿದಾಗ ಅಲ್ಲಿ ಮೊದಲೇ ಕಾಯುತ್ತಿದ್ದ ಆದಿಲ್ ಮತ್ತು ಇತರರು ಆತನ ಮೇಲೆ ಮುಗಿಬಿದ್ದಿದ್ದಾರೆ. ಈ ಹಿಂದೆ ಶಾಂತಿ ಮಾಡುವುದಾಗಿ ಹಣ ತೆಗೆದುಕೊಂಡಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ಜಗಳ ತೆಗೆದು, ಲಾಂಗ್ ಹಾಗೂ ಮಚ್ಚು ಝಳಪಿಸಿ ಹಲ್ಲೆ ನಡೆಸಿದ್ದಾರೆ.
ಬಳಿಕ ಜ್ಯೋತಿಷಿಯನ್ನು ಹೆದರಿಸಿದ ಆರೋಪಿಗಳು ಕಾರಿನಲ್ಲೇ ಕೂರಿಸಿಕೊಂಡು ಬಲವಂತವಾಗಿ ಮೊಬೈಲ್ ಪಾಸ್ವರ್ಡ್ ಹಾಗೂ ಯುಪಿಐ (UPI) ಪಿನ್ ಪಡೆದುಕೊಂಡಿದ್ದಾರೆ. ಅಕೌಂಟ್ನಲ್ಲಿ 5 ಲಕ್ಷಕ್ಕೂ ಅಧಿಕ ಹಣವಿರುವುದನ್ನು ಗಮನಿಸಿದ ಆರೋಪಿ ಆರಿಫ್, ತಕ್ಷಣ 13 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಅಂದು ರಾತ್ರಿ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ, ಮರುದಿನ ಮನೆಗೆ ಕರೆ ಮಾಡಿಸಿ ದಾಖಲಾತಿಗಳನ್ನು ವಾಟ್ಸಾಪ್ ಮಾಡಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ.
ನಂತರ ಖಾಸಗಿ ಬ್ಯಾಂಕ್ಗೆ ಕರೆದೊಯ್ದು ವಿತ್ಡ್ರಾ ಫಾರ್ಮ್ ಭರ್ತಿ ಮಾಡಿಸಿ ಬಲವಂತವಾಗಿ ಸಹಿ ಹಾಕಿಸಿಕೊಂಡು ಸಂಜೆ ವೇಳೆಗೆ 4.25 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ದೋಚಿದ್ದಾರೆ. ಬಳಿಕ ದೂರುದಾರರನ್ನು ಕಾರಿನಲ್ಲಿ ಕರೆದೊಯ್ದು ದಾಬಸ್ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಇಳಿಸಿ, ವಿಷಯ ಹೊರಬರದಂತೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಇದೀಗ ನಾಲ್ವರನ್ನೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


Leave a Reply