ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಭರ್ಜರಿ ಸಿಟಿ ರೌಂಡ್ಸ್ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯಿಂದ ಹೆಚ್ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಅಲ್ಲಿಂದಲೇ ನೇರವಾಗಿ ನಗರ ಪ್ರದಕ್ಷಿಣೆ ಆರಂಭಿಸಲಿದ್ದಾರೆ.
ಫುಟ್ಪಾತ್ ಒತ್ತುವರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕೈಗೊಂಡಿರುವ ತೆರವು ಕಾರ್ಯಾಚರಣೆಯ ವಾಸ್ತವ ಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಲು ಮುಖ್ಯಮಂತ್ರಿಗಳು ಈ ಮಹತ್ವದ ಪರಿಶೀಲನೆಗೆ ಮುಂದಾಗಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಅವರು ಮೊದಲಿಗೆ ದೊಡ್ಡನೆಕ್ಕುಂದಿ ರಸ್ತೆಗೆ ಭೇಟಿ ನೀಡಿ ಫುಟ್ಪಾತ್ ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದಾರೆ. ತದನಂತರ ಔಟರ್ ರಿಂಗ್ ರಸ್ತೆ ಹಾಗೂ ಹೆಚ್ಎಸ್ಆರ್ ರಸ್ತೆಗಳಲ್ಲಿ ಸಂಚರಿಸಿ ವೀಕ್ಷಣೆ ನಡೆಸಲಿದ್ದಾರೆ. ಅಲ್ಲಿಂದ ಜಯನಗರದ 9th ಮುಖ್ಯ ರಸ್ತೆ, ಅಶೋಕ ಪಿಲ್ಲರ್ ರಸ್ತೆ ಹಾಗೂ ಧನ್ವಂತರಿ ರಸ್ತೆಗಳಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ಅಂತಿಮವಾಗಿ ಮಲ್ಲೇಶ್ವರಂನ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ಕೈಗೊಂಡಿರುವ ಫುಟ್ಪಾತ್ ತೆರವು ಕಾರ್ಯಾಚರಣೆಯನ್ನು ವೀಕ್ಷಿಸಿದ ಬಳಿಕ, ಮಧ್ಯಾಹ್ನ 1 ಗಂಟೆಗೆ ತಮ್ಮ ಸಿಟಿ ರೌಂಡ್ಸ್ ಮುಕ್ತಾಯಗೊಳಿಸಿ ಗೃಹ ಕಚೇರಿ ಕೃಷ್ಣಾಗೆ ವಾಪಸಾಗಲಿದ್ದಾರೆ.


Leave a Reply