ಕಲಬುರಗಿ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಎಇಇ (JESCOM AEE) ಆಗಿರುವ ಅಮೃತರಾವ್ ಯಲಾಲ್ ಎಂಬುವವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
7 ಕಡೆ ದಾಳಿ, ಎಲ್ಲೆಲ್ಲಿ ಪರಿಶೀಲನೆ?
ಲೋಕಾಯುಕ್ತ ಎಸ್.ಪಿ. ಸಿದ್ದರಾಜು ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ಅಮೃತರಾವ್ ಅವರ ನಿವಾಸ, ಬಸವ ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್, ಹಾಗೂ ಜಾಗೃತಿ ಕಾಲೋನಿಯಲ್ಲೇ ಇರುವ ಅವರಿಗೆ ಸೇರಿದ ‘ಪ್ಲಾಟಿನಂ ಸ್ಟುಡಿಯೋ’ ಮೇಲೂ ದಾಳಿ ನಡೆದಿದೆ. ಇದರ ಜೊತೆಗೆ, ನಗರದ ಕೊತ್ತಂಬರಿ ಲೇಔಟ್ನಲ್ಲಿರುವ ಜೆಸ್ಕಾಂ ಕಚೇರಿ ಮತ್ತು ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮತ್ತೊಂದು ಫ್ಲಾಟ್ನಲ್ಲೂ ಅಧಿಕಾರಿಗಳು ಕಡತಗಳನ್ನು ಜಾಲಾಡುತ್ತಿದ್ದಾರೆ.

ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ
ನಗರದ ಆಸ್ತಿಗಳಷ್ಟೇ ಅಲ್ಲದೆ, ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿರುವ ಅಮೃತರಾವ್ ಅವರ ಮನೆ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಇಇ ಅಮೃತರಾವ್ ಅವರು ಬರೋಬ್ಬರಿ 20ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಎಲ್ಲಾ ಏಳು ಸ್ಥಳಗಳಲ್ಲಿ ಏಕಕಾಲಕ್ಕೆ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಅಕ್ರಮ ಆಸ್ತಿಯ ಸಂಪೂರ್ಣ ವಿವರ ಹಾಗೂ ನಿಖರ ಮೌಲ್ಯದ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.


Leave a Reply