ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರ ತೀವ್ರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರಿನಲ್ಲೇ ಖಾಕಿ ಪಡೆಗೆ ಚಳ್ಳೆಹಣ್ಣು ತಿನ್ನಿಸಿರುವ ಆರೋಪಿಯೊಬ್ಬ, ಪೊಲೀಸ್ ಠಾಣೆಯಿಂದಲೇ ಎಸ್ಕೇಪ್ ಆಗಿರುವ ಆಘಾತಕಾರಿ ಘಟನೆ ನಡೆದಿದೆ. ಭದ್ರತೆ ನೀಡಬೇಕಾದ ಠಾಣೆಯಿಂದಲೇ ಆರೋಪಿ ಪರಾರಿಯಾಗಿರುವುದು ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅನುಮಾನ ಹಾಗೂ ಟೀಕೆಗಳಿಗೆ ಕಾರಣವಾಗಿದೆ.
ಮೊಬೈಲ್ ಲೊಕೇಶನ್ ಆಧರಿಸಿ ಪುಣೆಯಲ್ಲಿ ಬಂಧನ

ಅಫಜಲಪುರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿದ್ದ ಈ ಆರೋಪಿ, ಮಹಾರಾಷ್ಟ್ರದ ಪುಣೆಗೆ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ಪೊಲೀಸರು, ಆತನ ಮೊಬೈಲ್ ಲೊಕೇಶನ್ ಜಾಡು ಹಿಡಿದು ಪುಣೆಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರೋಪಿ ಹಾಗೂ ಸಂತ್ರಸ್ತ ಬಾಲಕಿಯನ್ನು ಅಫಜಲಪುರಕ್ಕೆ ಕರೆತರಲಾಗಿತ್ತು.
ಎರಡನೇ ಮಹಡಿಯಿಂದ ಜಿಗಿದು ಪರಾರಿ
ಸಂಜೆಯ ವೇಳೆ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲೇ ಇದ್ದ ಆರೋಪಿ, ರಾತ್ರಿ ಕಾವಲಿದ್ದ ಸಿಬ್ಬಂದಿಯ ಕಣ್ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ. ಕಳೆದ ರಾತ್ರಿ ಸುಮಾರು 3 ಗಂಟೆಯ ಹೊತ್ತಿಗೆ ಠಾಣೆಯ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಆತ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ಆರೋಪಿಗಾಗಿ ಮುಂದುವರಿದ ಶೋಧ
ಕೈಗೆ ಸಿಕ್ಕಿದ್ದ ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿರುವ ವಿಷಯ ತಿಳಿದು ಎಚ್ಚೆತ್ತುಕೊಂಡಿರುವ ಅಫಜಲಪುರ ಪೊಲೀಸರು, ಆತನ ಪತ್ತೆಗಾಗಿ ಇದೀಗ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿ ತಪ್ಪಿಸಿಕೊಂಡಿರುವ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿಯೇ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಮರುಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.


Leave a Reply