ಬಿ.ವೈ.ವಿಜಯೇಂದ್ರರನ್ನ ಕಿತ್ತೊಗೆಯಲು ಹೇಳಿದ್ರಾ ಸದಾನಂದ ಗೌಡ? ಬಿರುಗಾಳಿಯೆಬ್ಬಿಸಿದ Viral ಆಡಿಯೋ!

ಹಂಚಿಕೊಳ್ಳಿ

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಪ್ರಹಸನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಹೊತ್ತಿಕೊಂಡಿದ್ದ ಅಸಮಾಧಾನದ ಕಿಡಿ ಇದೀಗ ಬಹುದೊಡ್ಡ ಜ್ವಾಲೆಯಾಗಿ ಪರಿಣಮಿಸುವ ಹಂತಕ್ಕೆ ತಲುಪಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ದೆಹಲಿ ಮಟ್ಟದ ಪಕ್ಷದ ಪ್ರಮುಖ ಪ್ರತಿನಿಧಿಯೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಈ ವೈರಲ್ ಆಡಿಯೋದಲ್ಲಿ ‘ಪ್ರದೀಪ್ ಜಿ’ ಎಂದು ಸಂಬೋಧಿಸಿ ಮಾತನಾಡಿರುವ ಧ್ವನಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರದ್ದೇ ಎಂಬ ಬಲವಾದ ಆರೋಪ ಕೇಳಿಬಂದಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಬಿ.ವೈ. ವಿಜಯೇಂದ್ರ‌ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಬಿಡಿ, ಆ ಬಳಿಕ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಎಂಬ ಮಾತುಗಳು ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಬಂದಿದ್ದು, ಈ ಮಾತಿನ ಶೈಲಿ ಮತ್ತು ಸ್ವರ ಸಂಪೂರ್ಣವಾಗಿ ಡಿವಿಎಸ್ ಅವರನ್ನೇ ಹೋಲುತ್ತಿದೆ ಎನ್ನಲಾಗಿದೆ.

ಈಗಲೇ ಅವರನ್ನು ಸ್ಥಾನದಿಂದ ತೆಗೆದುಹಾಕಿದರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಎನ್ನುವ ಕಟು ಟೀಕೆಗೆ ಗುರಿಯಾಗುವ ಅಪಾಯವಿದೆ ಹಾಗೂ ಇದರಿಂದ ಪಕ್ಷಕ್ಕೆ ಹಾನಿಯಾಗಬಹುದು. ಆದ್ದರಿಂದ ಅಕ್ಟೋಬರ್ ವರೆಗೂ ಕಾದು ವಿಜಯೇಂದ್ರ‌ ಅವರನ್ನು ಕಿತ್ತುಹಾಕಿ, ಯೋಗ್ಯರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಪಕ್ಷದೊಳಗಿನ ಎಲ್ಲಾ ವಿರೋಧಗಳು ತಣ್ಣಗಾಗಲಿವೆ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ. ತಮಗೆ ಉತ್ತಮ ಅವಕಾಶಗಳು ಸಿಕ್ಕರೆ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ, ಜನಸಾಮಾನ್ಯರು ಮತ್ತು ಆಟೋ ಚಾಲಕರೊಂದಿಗೂ ತಮಗೆ ಉತ್ತಮ ಸಂಪರ್ಕವಿದೆ ಎಂಬ ಮಾತುಗಳು ಸಹ ಈ ಸಂಭಾಷಣೆಯಲ್ಲಿ ದಾಖಲಾಗಿವೆ.

ಆಡಿಯೋ ನನ್ನದಲ್ಲ ಎಂದ ಮಾಜಿ ಮುಖ್ಯಮಂತ್ರಿ

ತಮ್ಮ ಹೆಸರಿನಲ್ಲಿ ಆಡಿಯೋ ಭಾರಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಮಾಧ್ಯಮಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿ.ವಿ. ಸದಾನಂದಗೌಡ ಅವರು, ಈ ವಿಚಾರವಾಗಿ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮದಲ್ಲದ ನಕಲಿ ವಿಡಿಯೋ ಹಾಗೂ ಆಡಿಯೋಗಳ ಬಗ್ಗೆ ಇದುವರೆಗೆ ತಲೆಕೆಡಿಸಿಕೊಂಡಿಲ್ಲ ಮತ್ತು ಉತ್ತರವನ್ನೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಸತ್ಯ ಏನೆಂಬುದನ್ನು ಮಾಧ್ಯಮದವರೇ ಸ್ವತಃ ತನಿಖೆ ಮಾಡಿ ಕಂಡುಹಿಡಿಯಬೇಕು, ಇದಕ್ಕಾಗಿ ನಾನೇಕೆ ಪೊಲೀಸರಿಗೆ ದೂರು ನೀಡಬೇಕು ಎಂದು ಅವರು ಮರುಪ್ರಶ್ನಿಸಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ನಾನೇನು ಕಳ್ಳನಲ್ಲ, ಒಂದು ವೇಳೆ ತಪ್ಪು ಮಾಡಿದ್ದರೆ ಬಾಗಿಲು ಹಾಕಿಕೊಂಡು ಮನೆಯೊಳಗೆ ಕುಳಿತುಕೊಳ್ಳುತ್ತಿದ್ದೆ ಎಂದು ಅವರು ಕಿಡಿಕಾರಿದ್ದಾರೆ. ಕೆಲವು ಮಾಧ್ಯಮಗಳು ಕೇವಲ ಟಿಆರ್‌ಪಿಗಾಗಿ ಇಂತಹ ರಾಜಕೀಯ ಮಾಡುತ್ತಿವೆ, ಈ ವಿಚಾರವಾಗಿ ಯಾರೊಂದಿಗೂ ಚರ್ಚಿಸುವುದಿಲ್ಲ ಮತ್ತು ರಾಷ್ಟ್ರೀಯ ನಾಯಕರು ವಿವರಣೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸುತ್ತೇನೆ ಎಂದು ಡಿವಿಎಸ್ ಕಡ್ಡಿಮುರಿದಂತೆ ಹೇಳಿದ್ದಾರೆ.

ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ

ಮಂಗಳೂರು ಭಾಗದ ಸದಾನಂದಗೌಡರು ಅಪ್ಪಟ ಒಕ್ಕಲಿಗರೇ ಅಲ್ಲ ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಡಿವಿಎಸ್ ಇದೇ ಸಂದರ್ಭದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್.ಆರ್. ವಿಶ್ವನಾಥ್ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ತಿಳಿದಿದೆ, ಆತ ಹಿಂದೆ ಭೂಗತ ಪಾತಕಿ ಮುತ್ತಪ್ಪ ರೈ ಕೈಕೆಳಗೆ ಕೆಲಸ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದ ವ್ಯಕ್ತಿ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗುಂಡಾಗಿರಿ ಮಾಡಿಕೊಂಡಿದ್ದಂತಹ ವ್ಯಕ್ತಿಯ ಬಗ್ಗೆ ನಾನು ಮಾತನಾಡಬೇಕಾದ ಅವಶ್ಯಕತೆಯಿಲ್ಲ, ಕೊಳ್ಳೆ ಹೊಡೆಯುವುದು ಮತ್ತು ಅಕ್ರಮವಾಗಿ ಹಣ ಮಾಡುವುದಷ್ಟೇ ಅವನ ಏಕೈಕ ಕೆಲಸ ಎಂದು ಡಿ.ವಿ. ಸದಾನಂದಗೌಡ ಅವರು ಯಲಹಂಕ ಶಾಸಕನ ವಿರುದ್ಧ ಏಕವಚನದಲ್ಲೇ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬೆಳವಣಿಗೆಗಳು ರಾಜ್ಯ ಬಿಜೆಪಿಯ ಆಂತರಿಕ ಭಿನ್ನಮತವನ್ನು ಮತ್ತಷ್ಟು ಸ್ಫೋಟಗೊಳಿಸಿವೆ.

Leave a Reply

Your email address will not be published. Required fields are marked *

Advertisement


This will close in 3 seconds