ಶಿವಮೊಗ್ಗ: ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ಜಲ ವಿದ್ಯುದಾಗಾರದಲ್ಲಿ (Sharavathi Hydroelectric Project) ಇಂದು ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಜಲ ವಿದ್ಯುದಾಗಾರಕ್ಕೆ ನೀರು ಹರಿಸುವ ಬೃಹತ್ ಪೈಪ್ ಲೀಕೇಜ್ ಆಗಿ, ನೀರು ನೇರವಾಗಿ ವಿದ್ಯುತ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ಪರಿಣಾಮ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿಯಿರುವ ಈ ಜಲವಿದ್ಯುದಾಗಾರದ 7 ನೇ ಘಟಕದ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಹಠಾತ್ತನೆ ನೀರು ಸರಬರಾಜು ಮಾಡುವ ಬೃಹತ್ ಪೈಪ್‌ನಲ್ಲಿ ಸೋರಿಕೆ (Pipe Leakage) ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಧುಮ್ಮಿಕ್ಕಿದ ನೀರು ಇಡೀ ನೆಲಮಾಳಿಗೆಯನ್ನು ಆವರಿಸಿಕೊಂಡಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಸುರಕ್ಷತಾ ದೃಷ್ಟಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು 1, 8 ಮತ್ತು 9 ನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಅವಘಡ ಸಂಭವಿಸುತ್ತಿದ್ದಂತೆ ಎಚ್ಚೆತ್ತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಸತತ ಶ್ರಮವಹಿಸಿ ನೀರು ಸೋರಿಕೆಯನ್ನು ಯಶಸ್ವಿಯಾಗಿ ತಡೆದಿದ್ದಾರೆ. ತದನಂತರ ನೆಲಮಾಳಿಗೆಗೆ ನುಗ್ಗಿದ್ದ ನೀರನ್ನು ಸಂಪೂರ್ಣವಾಗಿ ಮೋಟಾರ್‌ಗಳ ಮೂಲಕ ಹೊರಹಾಕಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸ್ಥಗಿತಗೊಳಿಸಲಾಗಿದ್ದ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಪುನಃ ಆರಂಭಿಸಲಾಗಿದೆ.
ಶರಾವತಿ ಜಲ ವಿದ್ಯುದಾಗಾರವು ಕರ್ನಾಟಕದ ಅತ್ಯಂತ ಪ್ರಮುಖ ವಿದ್ಯುತ್ ಮೂಲವಾಗಿದೆ. ಇಲ್ಲಿ ಒಟ್ಟು 10 ಘಟಕಗಳಿದ್ದು, ವಾರ್ಷಿಕವಾಗಿ ಸುಮಾರು 1035 ಮೆಗಾ ವ್ಯಾಟ್ (MW) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸದೆ ಇಡೀ ಘಟಕ ಸುರಕ್ಷಿತವಾಗಿದೆ.


Leave a Reply