ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) ನೂತನ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮವು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಳೆದ 2024 ರಲ್ಲಿ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕೊಚ್ಚಿಹೋದಾಗ ಕೇವಲ ಏಳೇ ದಿನಗಳಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ, ರೈತರ ಹಿತ ಕಾಯಲು ಶ್ರಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಈ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡದಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಅಸಮಾಧಾನ ಮೂಡಿಸಿದೆ.
7 ದಶಕಗಳ ಇತಿಹಾಸವಿರುವ ಟಿಬಿ ಡ್ಯಾಂನ ಗೇಟ್‌ಗಳು ಜರ್ಜರಿತವಾಗಿದ್ದ ಹಿನ್ನೆಲೆಯಲ್ಲಿ, ತಜ್ಞರ ವರದಿ ಆಧರಿಸಿ ಸುಮಾರು 51 ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್ಲಾ 33 ಗೇಟ್‌ಗಳನ್ನು ಹೊಸದಾಗಿ ಮರುನಿರ್ಮಾಣ ಮಾಡಲಾಗಿದ್ದು, ಇಂದು ಅವುಗಳ ಲೋಕಾರ್ಪಣೆಯಾಗುತ್ತಿದೆ. ಅಂದು ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಯೋಜನೆಗೆ ಕಾರಣಕರ್ತರಾಗಿದ್ದ ಸಿದ್ದರಾಮಯ್ಯನವರನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಯಬೇಕಿತ್ತು. ಆದರೆ ಸರ್ಕಾರ ಈ ದೊಡ್ಡತನ ತೋರಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನೊಂದೆಡೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (MLA Raghavendra Hitnal) ಈ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, “ಸರ್ಕಾರದ ವತಿಯಿಂದ ಅವರಿಗೆ ಅಧಿಕೃತ ಆಹ್ವಾನ ನೀಡಬೇಕಿತ್ತು. ನಾನು ವೈಯಕ್ತಿಕವಾಗಿ ಅವರನ್ನು ಆಹ್ವಾನಿಸಿದ್ದೆ. ಆದರೆ ಬೇರೆ ಪ್ರಮುಖ ಕೆಲಸಗಳಿದ್ದ ಕಾರಣ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.


Leave a Reply