ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಪ್ರಯಾಣಿಕರೇ ಇವರ Target! ನಾಲ್ವರು ಮಂಗಳಮುಖಿಯರ ದರೋಡೆ ಗ್ಯಾಂಗ್ ಅರೆಸ್ಟ್

ಹಂಚಿಕೊಳ್ಳಿ

ತುಮಕೂರು ಜಿಲ್ಲೆಯ ಶಿರಾ ಪಟ್ಟಣ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಒಂಟಿಯಾಗಿ ಪ್ರಯಾಣಿಸುವ ಕಾರು ಚಾಲಕರು ಮತ್ತು ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ, ಬೆದರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ.

ಬಂಧಿತರ ವಿವರ

ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಕೃತ್ಯವೆಸಗುತ್ತಿದ್ದ ಈ ಗುಂಪಿನ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಬಳ್ಳಾರಿ ಜಿಲ್ಲೆಯ ಕೆರೆತಂಡ ಗ್ರಾಮದ ರೂಪಾ ಅಲಿಯಾಸ್ ಶಂಕರ ನಾಯ್ಕ್, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಾಗಿಣಿ ಅಲಿಯಾಸ್ ಯೋಗೀಶ್ ಜಿ.ಆರ್, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೆಮರಹಳ್ಳಿ ಗ್ರಾಮದ ಕನಸು ಅಲಿಯಾಸ್ ಕಿರಣ್ ಕುಮಾರ್ ಎಚ್.ಆರ್ ಹಾಗೂ ತುಮಕೂರು ಮೂಲದ ಕೀರ್ತಿ ಅಲಿಯಾಸ್ ಧನುಷ್ ಎಂದು ಗುರುತಿಸಲಾಗಿದೆ.

ಬೆಳ್ಳಂಬೆಳಗ್ಗೆ ಡ್ರೈವರ್‌ಗೆ ಬೆದರಿಸಿ ಸುಲಿಗೆ

ಜೂನ್ 14 ರಂದು ಮುಂಜಾನೆ 4 ಗಂಟೆ ಸುಮಾರಿಗೆ ತುಮಕೂರು-ಹಿರಿಯೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 48 ರ ಶಿರಾದ ವಿಶ್ರಾಂತಿ ಪ್ರದೇಶದ (Rest Area) ಬಳಿ ವ್ಯಕ್ತಿಯೊಬ್ಬರು ತಮ್ಮ ಕಾರು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಕಾರಿನ ಬಳಿ ಬಂದ ಐವರು ಮಂಗಳಮುಖಿಯರ ಗುಂಪು ಹಣ ನೀಡುವಂತೆ ಬೇಡಿಕೆ ಇಟ್ಟಿದೆ.

ಕಾರಿನಲ್ಲಿದ್ದವರು ಹಣ ನೀಡಲು ನಿರಾಕರಿಸಿದಾಗ, ತಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆಂದು ಕೂಗಿ ಜನ ಸೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಬಲವಂತವಾಗಿ ಕಾರಿನಲ್ಲಿದ್ದವರ ಬಳಿಯಿದ್ದ ಟೈಟಾನ್ ವಾಚ್, ಎರಡು ಬೆಳ್ಳಿಯ ಉಂಗುರಗಳು ಮತ್ತು 5,000 ರೂ. ನಗದನ್ನು ಕಿತ್ತುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳದಿಂದ ಪರಾರಿಯಾಗುವ ಮುನ್ನ ಫೋನ್‌ಪೇ (PhonePe) ಮೂಲಕ ಬಲವಂತವಾಗಿ 4,000 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.

ವಿಶೇಷ ತಂಡದಿಂದ ಆರೋಪಿಗಳ ಸೆರೆ

ಈ ಘಟನೆ ಕುರಿತು ಶಿರಾ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ ಅವರು ಆರೋಪಿಗಳ ಪತ್ತೆಗಾಗಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಿದ್ದರು.

ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳುವಾಗಿದ್ದ 4,000 ರೂ. ನಗದು, ಟೈಟಾನ್ ವಾಚ್ ಹಾಗೂ ಎರಡು ಬೆಳ್ಳಿ ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

Advertisement


This will close in 3 seconds