ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮೊದಲ ರಾಜಕೀಯ ಅಗ್ನಿಪರೀಕ್ಷೆ ಎದುರಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಪರಿಷತ್ ಚುನಾವಣೆಯಲ್ಲಿ (Council Election) ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಇಂದು ಸಂಜೆ ತಮ್ಮ ಮೊದಲ ಶಾಸಕಾಂಗ ಪಕ್ಷದ (CLP Meeting) ಮಹತ್ವದ ಸಭೆಯನ್ನು ಕರೆಯಲಿದ್ದಾರೆ.
ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಇಂದು ಸಂಜೆ ಈ ಉನ್ನತ ಮಟ್ಟದ ಶಾಸಕಾಂಗ ಪಕ್ಷದ ಸಭೆ ಆಯೋಜನೆಯಾಗಿದ್ದು, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಪೂರ್ಣ ಗೆಲುವಿನ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಮುಖ್ಯಮಂತ್ರಿಯಾದ ಬಳಿಕ ಡಿಕೆಶಿ ಎದುರಿಸುತ್ತಿರುವ ಮೊದಲ ಸವಾಲು ಇದಾಗಿದ್ದು, ಶಾಸಕರ ಮತಗಳು ಕೈತಪ್ಪದಂತೆ ನೋಡಿಕೊಳ್ಳಲು ಈ ಸಭೆ ಅತ್ಯಂತ ನಿರ್ಣಾಯಕವಾಗಿದೆ.

5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವಿಗೆ ರಣತಂತ್ರ: ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿರುವ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರ ಗೆಲುವು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಂಖ್ಯಾಬಲದ ಕೊರತೆಯ ನಡುವೆಯೂ 5ನೇ ಅಭ್ಯರ್ಥಿಯನ್ನು ಸುರಕ್ಷಿತವಾಗಿ ದಡ ಮುಟ್ಟಿಸಲು ಸಿಎಂ ಡಿಕೆಶಿ ಹೈವೋಲ್ಟೇಜ್ ರಣತಂತ್ರಗಳನ್ನು ಹೆಣೆದಿದ್ದಾರೆ. ಶಾಸಕರನ್ನು ಒಟ್ಟಾಗಿ ಇಡುವುದು ಮತ್ತು ಮತಗಳ ವಿಭಜನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಇಂದಿನ ರೆಸಾರ್ಟ್ ಸಭೆಯಲ್ಲಿ ಶಾಸಕರಿಗೆ ಖಡಕ್ ಸೂಚನೆಗಳು ಹಾಗೂ ಜವಾಬ್ದಾರಿಗಳನ್ನು ಹಂಚುವ ಸಾಧ್ಯತೆ ದಟ್ಟವಾಗಿದೆ.


Leave a Reply