ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ಆಡಳಿತರೂಢ ಕಾಂಗ್ರೆಸ್ ತನ್ನ ಶಾಸಕರನ್ನು ಬಿಡದಿಯ ವಂಡರ್ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಇದಾಗಿದ್ದು, ಇಂದು ಸಂಜೆ 6 ಗಂಟೆಗೆ ಇದೇ ರೆಸಾರ್ಟ್‌ನಲ್ಲಿ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ಸಭೆ ಮುಗಿದ ಬಳಿಕ ಎಲ್ಲಾ ಶಾಸಕರು ಭದ್ರತೆಯ ಹಿತದೃಷ್ಟಿಯಿಂದ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಶಾಸಕರು ತಂಗಲು ವಂಡರ್ಲಾ ರೆಸಾರ್ಟ್‌ನಲ್ಲಿ ಒಟ್ಟು 140 ರೂಮ್‌ಗಳನ್ನು ಕಾಯ್ದಿರಿಸಲಾಗಿದ್ದು, ಶಾಸಕರು ಇವತ್ತು ಮತ್ತು ನಾಳೆ ಕೂಡ ಅಲ್ಲೇ ಉಳಿದುಕೊಳ್ಳಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಎಲ್ಲಿ ತಮ್ಮ ಮತಗಳು ಹಂಚಿಹೋಗುತ್ತವೆಯೋ ಎಂಬ ತೀವ್ರ ಆತಂಕದಿಂದಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಈ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಅಡ್ಡ ಮತದಾನವನ್ನು ತಡೆಯುವ ಹಾಗೂ ಮತಗಳು ಅಸಿಂಧುವಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಶಾಸಕರಿಗೆ ಇದೇ ರೆಸಾರ್ಟ್‌ನಲ್ಲಿ ಮತದಾನದ ಪ್ರಕ್ರಿಯೆ ಕುರಿತು ವಿಶೇಷ ತರಬೇತಿಯನ್ನೂ ನೀಡಲು ನಾಯಕರು ಮುಂದಾಗಿದ್ದಾರೆ.

ಕಾಂಗ್ರೆಸ್‌ನ 14 ಶಾಸಕರನ್ನು ಜೆಡಿಎಸ್ ನಾಯಕರು ಈಗಾಗಲೇ ಸಂಪರ್ಕ ಮಾಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯಿದ್ದು, ಇದರ ಜೊತೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು 3 ಪಕ್ಷೇತರ ಶಾಸಕರನ್ನೂ ಸಂಪರ್ಕಿಸಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆಪರೇಷನ್‌ಗಳಿಗೆ ಅವಕಾಶ ನೀಡದಂತೆ ತಮ್ಮ ಶಾಸಕರನ್ನು ಒಗ್ಗಟ್ಟಾಗಿ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ಈ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಜೂನ್ 18 ರಂದು ಮತದಾನ ನಡೆಯಲಿದ್ದು, ಅಂದು ಶಾಸಕರು ರೆಸಾರ್ಟ್‌ನಿಂದಲೇ ತಂಡ ತಂಡವಾಗಿ ನೇರವಾಗಿ ವಿಧಾನಸೌಧಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸುವಂತೆ ವ್ಯವಸ್ಥೆ ಮಾಡಲಾಗಿದೆ.


Leave a Reply