ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಪವಿತ್ರ ಗೌಡ ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ವಿಚಾರಣೆ ಇಂದಿನಿಂದ ಅತ್ಯಂತ ವೇಗವಾಗಿ ಹೊಸ ಮರುರೂಪ ಪಡೆದುಕೊಳ್ಳಲಿದೆ. ಇಂದಿನಿಂದ ಹೊಸ ನ್ಯಾಯಾಧೀಶರ ನೇತೃತ್ವದಲ್ಲಿ ಈ ಹೈಪ್ರೊಫೈಲ್ ಪ್ರಕರಣದ ಅಧಿಕೃತ ಟ್ರಯಲ್ (ನ್ಯಾಯಾಲಯದ ವಿಚಾರಣೆ) ಪ್ರಕ್ರಿಯೆಗಳು ಆರಂಭವಾಗುತ್ತಿವೆ.
ಬೆಂಗಳೂರಿನ ಸಿಸಿಹೆಚ್ (CCH) 59ನೇ ಕೋರ್ಟ್‌ನಲ್ಲಿ ಈ ಮಹತ್ವದ ವಿಚಾರಣೆ ನಡೆಯಲಿದ್ದು, ನೂತನ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರ ಮುಂದೆ ಇಂದಿನಿಂದ ಕೌಂಟ್‌ಡೌನ್ ಶುರುವಾಗಲಿದೆ. ಇಂದಿನ ಟ್ರಯಲ್ ಪ್ರಕ್ರಿಯೆ ಅತ್ಯಂತ ನಿರ್ಣಾಯಕವಾಗಿರುವುದರಿಂದ ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ನಟ ದರ್ಶನ್ ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಜೈಲಿನಿಂದಲೇ ಕೋರ್ಟ್ ಹಾಜರಾತಿ ನೀಡಲಿದ್ದಾರೆ. ಇನ್ನುಳಿದಂತೆ ಬೇಲ್ ಮೇಲೆ ಹೊರಗಿರುವ ಹಾಗೂ ಇತರೆ ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ.

ಪ್ರಕರಣವನ್ನು ಸುದೀರ್ಘವಾಗಿ ಎಳೆಯದೆ, ಕೇವಲ ಒಂದು ವರ್ಷದ ಒಳಗಾಗಿ ಇಡೀ ಟ್ರಯಲ್ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಕಠಿಣ ಗಡುವು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ವಿಶೇಷ ಸರ್ಕಾರಿ ಅಭಿಯೋಜಕರು (SPP) ಇಂದು ನ್ಯಾಯಾಧೀಶರ ಗಮನಕ್ಕೆ ತರಲಿದ್ದಾರೆ. ಇನ್ನು ಮುಂದೆ ಪ್ರತಿದಿನ ಅಥವಾ ವಾರದಲ್ಲಿ ಕನಿಷ್ಠ 4 ದಿನಗಳ ಕಾಲ ಸತತವಾಗಿ ಟ್ರಯಲ್ ನಡೆಸುವ ಬಗ್ಗೆ ಇಂದಿನ ಕೋರ್ಟ್ ಕಲಾಪದಲ್ಲಿ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.


Leave a Reply