ಪರಿಹಾರ ವಿಳಂಬಕ್ಕೆ ಆಕ್ರೋಶ, BTDA ಕಚೇರಿಯಲ್ಲೇ ಸಿಬ್ಬಂದಿಗೆ ಚಪ್ಪಲಿ ಏಟು ಕೊಟ್ಟ ರೈತ!

ಹಂಚಿಕೊಳ್ಳಿ

ಬಾಗಲಕೋಟೆ: ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ನೀಡಬೇಕಾದ ನಿವೇಶನ ಹಾಗೂ ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶಗೊಂಡ ರೈತನೊಬ್ಬ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (BTDA) ಕಚೇರಿಯಲ್ಲಿಯೇ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಕಚೇರಿಯೊಳಗೆ ನಡೆದ ಈ ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪರಿಹಾರದ ವಿಚಾರವಾಗಿ ಕಚೇರಿಗೆ ಆಗಮಿಸಿದ್ದ ರೈತ ಬಸಪ್ಪ ದೊಡ್ಡಮನಿ ಎಂಬುವವರು, ಬಿಟಿಡಿಎ ಸಿಬ್ಬಂದಿ ನೀಲಕಂಠ ಅಂಕದ ಅವರ ಜೊತೆ ತೀವ್ರ ವಾಗ್ವಾದಕ್ಕಿಳಿದು ಏಕಾಏಕಿ ಚಪ್ಪಲಿಯಿಂದ ಹಲ್ಲೆ ನಡೆಸಿರುವುದು ಮೊಬೈಲ್ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಯಾಗಿದೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹಲ್ಲೆ ನಡೆಯುತ್ತಿದ್ದಂತೆಯೇ ಕಚೇರಿಯಲ್ಲಿದ್ದ ಇತರ ಸಿಬ್ಬಂದಿ ಕೂಡಲೇ ಮಧ್ಯಪ್ರವೇಶಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತು, ಹಲ್ಲೆಗೊಳಗಾದ ಸಿಬ್ಬಂದಿ ನೀಲಕಂಠ ಅವರನ್ನು ರಕ್ಷಿಸಿ ಬೇರೊಂದು ಕೊಠಡಿಗೆ ಕರೆದೊಯ್ದಿದ್ದಾರೆ. ಈ ವೇಳೆ ರೈತ ಬಸಪ್ಪ ಹಾಗೂ ಅವರೊಂದಿಗೆ ಬಂದಿದ್ದ ಬೆಂಬಲಿಗರ ಗುಂಪು ಪ್ರಾಧಿಕಾರದ ಕಚೇರಿಯಲ್ಲಿ ಕೆಲಕಾಲ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ನಿರ್ಗಮಿಸಿದೆ.

ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಅಧಿಕಾರಿ ನೀಲಕಂಠ ಅಂಕದ ಅವರು ಬಾಗಲಕೋಟೆ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds