ಧರ್ಮಸ್ಥಳ ‘ಬುರುಡೆ ಕೇಸ್’: Mask Man ಚಿನ್ನಯ್ಯನಿಂದ ಸ್ಪೋಟಕ ಸತ್ಯ ಬಹಿರಂಗ, ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ!

ಹಂಚಿಕೊಳ್ಳಿ

ಧರ್ಮಸ್ಥಳದ ವಿರುದ್ಧ ಹೆಣೆಯಲಾಗಿದ್ದ ಷಡ್ಯಂತ್ರದ ‘ಬುರುಡೆ ಕೇಸ್’ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಮಾಸ್ಕ್ ಧರಿಸಿ ಬಂದು ಸುಳ್ಳು ಆರೋಪಗಳನ್ನು ಮಾಡಿದ್ದ ಎನ್ನಲಾದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ, ಇದೀಗ ಬುರುಡೆ ಗ್ಯಾಂಗ್ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದು, ಸ್ಪೋಟಕ ಸತ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ತನ್ನೊಬ್ಬನನ್ನೇ ಜೈಲಿಗಟ್ಟಿ, ಅಸಲಿ ಷಡ್ಯಂತ್ರಕಾರರ ವಿರುದ್ಧ ಎಸ್‌ಐಟಿ (SIT) ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ ನ್ಯಾಯಾಲಯದಲ್ಲಿ ಗಂಭೀರ ಆರೋಪ ಮಾಡಿದ್ದಾನೆ.

ಮಾಸ್ಕ್ ಒಳಗೆ ಹೆಡ್‌ಫೋನ್ ಮತ್ತು 50 ಲಕ್ಷದ ಆಮಿಷ

ಈ ಇಡೀ ಪ್ರಕರಣದ ಹಿಂದೆ ಮಹಾ ಷಡ್ಯಂತ್ರವೇ ಅಡಗಿದೆ ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ವಿವರಿಸಿದ್ದಾನೆ. ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಲು ತನಗೆ ಬರೋಬ್ಬರಿ 50 ಲಕ್ಷ ರೂಪಾಯಿಗಳ ಆಮಿಷವೊಡ್ಡಲಾಗಿತ್ತು ಎಂದು ಆತ ತಿಳಿಸಿದ್ದಾನೆ. ಅದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ, ಕ್ಯಾಮೆರಾ ಮುಂದೆ ತಾನು ಧರಿಸುತ್ತಿದ್ದ ಮಾಸ್ಕ್‌ನ ಒಳಭಾಗದಲ್ಲಿ ರಹಸ್ಯವಾಗಿ ಹೆಡ್‌ಫೋನ್ ಒಂದನ್ನು ಅಳವಡಿಸಲಾಗಿತ್ತು. ಯುಟ್ಯೂಬರ್‌ಗಳು ಆ ಹೆಡ್‌ಫೋನ್ ಮೂಲಕ ತಾನು ಏನು ಮಾತನಾಡಬೇಕು ಹಾಗೂ ಯಾವ ಸ್ಥಳಗಳನ್ನು ತೋರಿಸಬೇಕು ಎಂದು ನಿರ್ದೇಶನ ನೀಡುತ್ತಿದ್ದರು. ಅವರು ಹೇಳಿಕೊಟ್ಟಂತೆ 30 ರಿಂದ 35 ಸ್ಥಳಗಳ ವಿಡಿಯೋಗಳನ್ನು ಚಿತ್ರೀಕರಿಸಿ, ಷಡ್ಯಂತ್ರಕ್ಕೆ ಬಳಸಿಕೊಳ್ಳಲಾಯಿತು ಎಂದು ಚಿನ್ನಯ್ಯ ಬಹಿರಂಗಪಡಿಸಿದ್ದಾನೆ.

ಕೊಲೆ ಬೆದರಿಕೆ ಹಾಗೂ ಆತ್ಮಹತ್ಯೆ ಯತ್ನ

ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಹೇಳಲು ತನ್ನ ಆತ್ಮಸಾಕ್ಷಿ ಒಪ್ಪಿರಲಿಲ್ಲ ಎಂದು ಚಿನ್ನಯ್ಯ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಾಗ, ಪ್ರಮುಖ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ತನ್ನನ್ನು ಚಾಕುವಿನಿಂದ ಕೊಲ್ಲಲು ಯತ್ನಿಸಿದ್ದ ಎಂಬ ಗಂಭೀರ ಆರೋಪವನ್ನು ಆತ ಮಾಡಿದ್ದಾನೆ. ಇವರ ಈ ದೌರ್ಜನ್ಯ ಮತ್ತು ಷಡ್ಯಂತ್ರಗಳಿಂದ ತೀವ್ರ ಬೇಸತ್ತು, ತಾನು ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಎಂಡಿ ಸಮೀರ್, ಜಯಂತ್ ಮತ್ತು ಅಜಯ್ ಅಂಚನ್ ಸೇರಿದಂತೆ ಹಲವರು ಸೇರಿ ಈ ಷಡ್ಯಂತ್ರ ರೂಪಿಸಿದ್ದರು ಹಾಗೂ ಅದರಲ್ಲಿ ತನ್ನನ್ನು ಕೇವಲ ದಾಳವಾಗಿ ಬಳಸಿಕೊಂಡರು ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಎಸ್‌ಐಟಿ ತನಿಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಶ್ನೆ

ಈ ಎಲ್ಲಾ ಸ್ಪೋಟಕ ಮಾಹಿತಿಗಳನ್ನು ತಾನು ಎಸ್‌ಐಟಿ (SIT) ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರೂ, ನಿಜವಾದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಚಿನ್ನಯ್ಯನ ಪ್ರಮುಖ ಆರೋಪವಾಗಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿಯೇ ಈ ಬಗ್ಗೆ ದೂರು ನೀಡಿದ್ದರೂ, ಎಫ್‌ಐಆರ್ ಸಂಖ್ಯೆ 39/2025 ರ ತನಿಖೆಯನ್ನು ಎಸ್‌ಐಟಿ ಇನ್ನೂ ಪೂರ್ಣಗೊಳಿಸಿಲ್ಲ. ಪ್ರಾಥಮಿಕ ವರದಿಯಲ್ಲಿ ಹೆಸರಿಸಲಾದ ವ್ಯಕ್ತಿಗಳ ಮೇಲೆ ಸೂಕ್ತ ತನಿಖೆ ನಡೆಸದೆ, ಕೇವಲ ತನ್ನನ್ನು ಮಾತ್ರ ಜೈಲಿನಲ್ಲಿ ಇಟ್ಟಿರುವುದು ಏಕೆ ಎಂದು ಆತ ಪ್ರಶ್ನಿಸಿದ್ದಾನೆ. ಕೂಡಲೇ ಎಸ್‌ಐಟಿ ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಂತೆ ಸರ್ಕಾರ ಹಾಗೂ ತನಿಖಾ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾನೆ.

Leave a Reply

Your email address will not be published. Required fields are marked *

Advertisement


This will close in 3 seconds