ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಐದೂವರೆ ವರ್ಷದ ಪುತ್ರಿಯನ್ನು ಬರ್ಬರವಾಗಿ ಹ*ತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಿಯಲ್ ಎಸ್ಟೇಟ್ ಏಜೆಂಟ್ ಮೋಹನ್ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕೊ*ಲೆ ಪ್ರಕರಣದಲ್ಲಿ ತನ್ನ ಪ್ರೇಯಸಿ ಹಾಗೂ ವಕೀಲೆ ಪ್ರಿಯಾಂಕಾ ಪಾತ್ರದ ಬಗ್ಗೆ ಮೋಹನ್ ಹಲವು ಮಹತ್ವದ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಕೊ*ಲೆಯಾದ ಮಗು ವೆನ್ನೆಲ್ಲಾಳ ತಾಯಿ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರಂಭದಲ್ಲಿ ಬಾಲಕಿಯದ್ದು ಸಹಜ ಸಾವು ಎಂದೇ ಆರೋಪಿಗಳು ಬಿಂಬಿಸಲು ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಸ್ಪಷ್ಟವಾಗಿ ಬಯಲಾಗಿದೆ. ಮಗುವಿನ ಹೊಟ್ಟೆಯ ಒಳ ಭಾಗದಲ್ಲಿ ತೀವ್ರ ಪೆಟ್ಟು ಬಿದ್ದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮಾರ್ಚ್ 24 ರಂದು ಪ್ರಿಯಾಂಕಾ ಅವರ ಜನ್ಮದಿನವಿದ್ದ ಕಾರಣ, ಇಬ್ಬರೂ ಕೋಲಾರ ಬಳಿಯ ಕಾಫಿ ಡೇಗೆ ಕಾರಿನಲ್ಲಿ ತೆರಳಿದ್ದರು. ಮಗುವಿಗೆ ಬಿರಿಯಾನಿ ಮತ್ತು ಐಸ್ಕ್ರೀಮ್ ಕೊಡಿಸಿ, ಬಳಿಕ ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆವು, ಬೆಳಗ್ಗೆ ನೋಡುವಷ್ಟರಲ್ಲಿ ಮೃತಪಟ್ಟಿತ್ತು ಎಂದು ಪ್ರಿಯಾಂಕಾ ಕಥೆ ಕಟ್ಟಿದ್ದರು. ಆದರೆ ಮಗುವಿನ ತಂದೆ ಅನುಮಾನಗೊಂಡು ದೂರು ನೀಡಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ಈ ಬರ್ಬರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಮೋಹನ್ ವ್ಯವಸ್ಥಿತವಾಗಿ ಸಂಚು ರೂಪಿಸಿರುವುದು ತನಿಖೆಯ ವೇಳೆ ಸಾಬೀತಾಗಿದೆ. ಘಟನೆ ನಡೆದ ದಿನ ಮಗು ಹಾಗೂ ಆರೋಪಿ ಧರಿಸಿದ್ದ ಬಟ್ಟೆಗಳನ್ನು ನೀಡುವಂತೆ ಪೊಲೀಸರು ಕೇಳಿದಾಗ, ಆರೋಪಿ ಮೋಹನ್ ಬೇರೆ ಬಟ್ಟೆಗಳನ್ನು ನೀಡಿ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿರುವುದು ಪತ್ತೆಯಾಗಿದೆ. ಮಗುವನ್ನು ಕಾರಿನಲ್ಲೇ ಮಲಗಿಸಿ, ಹಾಗೆಯೇ ಮನೆಗೆ ಕರೆದೊಯ್ದು ಮಲಗಿಸಲಾಗಿತ್ತು ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಳಸಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿ ‘ಲುಮಿನಾಲ್’ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ದ್ರಾವಣವನ್ನು ಬಳಸಿ ಕಣ್ಣಿಗೆ ಕಾಣದ ರಕ್ತದ ಕಲೆಗಳನ್ನು ಪತ್ತೆ ಹಚ್ಚುವ ಈ ವೈಜ್ಞಾನಿಕ ಪರೀಕ್ಷೆಯ ಮೂಲಕ ಕರಾರುವಕ್ಕಾದ ಸಾಕ್ಷ್ಯಗಳನ್ನು ಕಲೆಹಾಕಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.

Leave a Reply