ಮಂಗಳೂರು: ಕರಾವಳಿ ನಗರಿ ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಆತನ ಸಚರ ಜಿತೇಶ್ ಎಂಬಾತನನ್ನು ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. 2024 ರಿಂದ ಆರಂಭವಾಗಿ 2026ರ ಜೂನ್‌ವರೆಗೆ ನಡೆದಿದ್ದ ಈ ಸುಲಿಗೆಯ ಜಾಲವು ಸದ್ಯ ಸಿನೆಮಾ ಕಥೆಯನ್ನೂ ಮೀರಿಸುವಂತಿದೆ.
ಅಶ್ಲೀಲ ವಿಡಿಯೋ ಇಟ್ಟುಕೊಂಡು ಮೊದಲ ಹಂತದ ಬ್ಲ್ಯಾಕ್‌ಮೇಲ್:

ಈ ಹನಿಟ್ರ್ಯಾಪ್ ಕಥೆಯ ರೂವಾರಿ ಜಿತೇಶ್, 2024ರಲ್ಲೇ ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರನ್ನು ತನ್ನ ಖೆಡ್ಡಾಕ್ಕೆ ಕೆಡವಿದ್ದನು. ಉದ್ಯಮಿ ಜೊತೆಗಿನ ತನ್ನದೇ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿದ್ದ ಜಿತೇಶ್, ಅದನ್ನು ಉದ್ಯಮಿಯ ಪತ್ನಿಗಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 35 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಸಮಾಜದಲ್ಲಿನ ತನ್ನ ಗೌರವ ಮತ್ತು ಮರ್ಯಾದೆಗೆ ಹೆದರಿದ ಉದ್ಯಮಿ, ಜಿತೇಶ್‌ಗೆ ಚೆಕ್ ಮೂಲಕ ಹಣ ನೀಡಿದ್ದರು. ಆದಾಗ್ಯೂ, ಜಿತೇಶ್ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸಲು ಆರಂಭಿಸಿದಾಗ, ಉದ್ಯಮಿ ಸಹಾಯಕ್ಕಾಗಿ ಮಂಗಳೂರು ಯುವ ಕಾಂಗ್ರೆಸ್ ಮುಖಂಡ ನಿಝಾಮ್‌ನನ್ನು ಸಂಪರ್ಕಿಸಿದ್ದರು.
ಇಲ್ಲಿಂದಲೇ ಕಥೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು. ಉದ್ಯಮಿಗೆ ಸಹಾಯ ಮಾಡಬೇಕಿದ್ದ ಕಾಂಗ್ರೆಸ್ ನಾಯಕ ನಿಝಾಮ್, ಉದ್ಯಮಿಯ ಮುಗ್ಧತೆ ಮತ್ತು ಭಯವನ್ನೇ ಬಂಡವಾಳ ಮಾಡಿಕೊಂಡು ಜಿತೇಶ್ ಜೊತೆ ಕೈಜೋಡಿಸಿದನು. ಇಬ್ಬರೂ ಸೇರಿ ಉದ್ಯಮಿಯನ್ನು ಮತ್ತಷ್ಟು ಲೂಟಿ ಮಾಡಲು ರೋಚಕ ಸ್ಕೆಚ್ ಹಾಕಿದರು.
2024ರ ಮೇ ತಿಂಗಳಲ್ಲಿ ನಿಝಾಮ್ ಉದ್ಯಮಿಗೆ ಕರೆ ಮಾಡಿ, “ನಿಮ್ಮ ಕಾಟ ತಾಳಲಾರದೆ ಜಿತೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಸಾಯುವ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರನ್ನೇ ಬರೆದಿದ್ದಾನೆ. ಪೊಲೀಸರು ಕೇಸ್ ದಾಖಲಿಸಿದರೆ ನೀವು ಜೈಲಿಗೆ ಹೋಗುವುದು ಗ್ಯಾರಂಟಿ” ಎಂದು ಹೆದರಿಸಿದ್ದನು. ಇಷ್ಟೇ ಅಲ್ಲದೆ, ಜಿತೇಶ್ ನೇಣಿಗೆ ಶರಣಾದ ನಕಲಿ ಚಿತ್ರ ಹಾಗೂ ಆತನ ಅಂತ್ಯಕ್ರಿಯೆ ನಡೆದಿದೆ ಎನ್ನಲಾದ ಫೋಟೋಗಳನ್ನು ಎಡಿಟ್ ಮಾಡಿ ಉದ್ಯಮಿಗೆ ತೋರಿಸಿ ಸಂಪೂರ್ಣವಾಗಿ ನಡುಗುವಂತೆ ಮಾಡಿದ್ದನು.
ಜೈಲು ಮತ್ತು ಮರ್ಯಾದೆಯ ಭಯದಿಂದ ಉದ್ಯಮಿ ನಿಝಾಮ್ ಹೇಳಿದ ಕಥೆಯನ್ನು ಸಂಪೂರ್ಣವಾಗಿ ನಂಬಿದ್ದರು. ಕೇಸ್ ಮುಚ್ಚಿಹಾಕಲು ಮತ್ತು ಜೈಲಿಗೆ ಹೋಗುವುದನ್ನು ತಪ್ಪಿಸಲು ನಿಝಾಮ್ ಕೇಳಿದಷ್ಟು ಕೋಟಿ ಕೋಟಿ ಹಣವನ್ನು ಕೊಡುತ್ತಾ ಬಂದಿದ್ದರು. ಹೀಗೆ 2024 ರಿಂದ 2026ರ ಮೇ ವರೆಗೆ ಬರೋಬ್ಬರಿ ಎರಡು ವರ್ಷಗಳ ಕಾಲ ಉದ್ಯಮಿ ಈ ಜೋಡಿಗೆ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿಗಳನ್ನು ನೀಡಿದ್ದರು.
ಆದರೆ, 2026ರ ಜೂನ್ ಮೊದಲ ವಾರದಲ್ಲಿ ಉದ್ಯಮಿಗೆ ಮಂಗಳೂರಿನ ರಸ್ತೆಯಲ್ಲೇ ಬಿಗ್ ಶಾಕ್ ಕಾದಿತ್ತು. ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಉದ್ಯಮಿಗೆ ಜೀವಂತವಾಗಿ ಕಣ್ಣೆದುರೇ ಓಡಾಡುತ್ತಿರುವುದು ಕಂಡುಬಂದಿದೆ! ತಾವು ಸಂಪೂರ್ಣವಾಗಿ ವಂಚನೆಗೆ ಒಳಗಾಗಿದ್ದೇವೆ ಎಂದು ಅರಿತ ಉದ್ಯಮಿ ತಕ್ಷಣವೇ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಉದ್ಯಮಿ ನೀಡಿದ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಉರ್ವಾ ಠಾಣೆ ಪೊಲೀಸರು ಜಿತೇಶ್ ಹಾಗೂ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಇಬ್ಬರನ್ನೂ ವಶಕ್ಕೆ ಪಡೆದು ಕಂಬಿ ಹಿಂದೆ ತಳ್ಳಿದ್ದಾರೆ. ಬಂಧಿತ ಆರೋಪಿ ನಿಝಾಮ್ ಮಂಗಳೂರು ಸೇರಿದಂತೆ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.


Leave a Reply