ಬಿಹಾರ: ಉತ್ತರ ಭಾರತದ ಪ್ರಮುಖ ಪವಿತ್ರ ಕ್ಷೇತ್ರಗಳ ದರ್ಶನಕ್ಕಾಗಿ ಆಂಧ್ರಪ್ರದೇಶದಿಂದ ಹೊರಟಿದ್ದ ಯಾತ್ರಾರ್ಥಿಗಳ ಬಸ್ ಬಿಹಾರದ ಔರಂಗಾಬಾದ್ ಜಿಲ್ಲೆಯ ಗ್ರಾಂಡ್ ಟ್ರಂಕ್ ರಸ್ತೆ (ರಾಷ್ಟ್ರೀಯ ಹೆದ್ದಾರಿ–2) ಮೇಲೆ ಭೀಕರ ಅಪಘಾತಕ್ಕೀಡಾಗಿದೆ. ಸೋಮವಾರ ಬೆಳಗಿನ ಜಾವ ಅಂದಾಜು 12:30ರ ಸುಮಾರಿಗೆ ಹೆದ್ದಾರಿಯ ಡಾಬಾ (ಲೈನ್ ಹೋಟೆಲ್) ಬಳಿ ನಿಂತಿದ್ದ ಟ್ರಕ್‌ಗೆ ಯಾತ್ರಿಕರ ಬಸ್ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಆಂಧ್ರಪ್ರದೇಶದ ಮೂವರು ಯಾತ್ರಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಂಗಮ್ ಮತ್ತು ಆತ್ಮಕೂರು ಪ್ರದೇಶಗಳಿಗೆ ಸೇರಿದ ಯಾತ್ರಾರ್ಥಿಗಳ ದೊಡ್ಡ ಗುಂಪೊಂದು ಜೂನ್ 1 ರಂದು ಖಾಸಗಿ ಬಸ್ ಬಾಡಿಗೆಗೆ ಪಡೆದು 15 ದಿನಗಳ ಕಾಲ ಧಾರ್ಮಿಕ ಪ್ರವಾಸಕ್ಕೆ ಹೊರಟಿತ್ತು. ಈಗಾಗಲೇ ಒಡಿಶಾದ ಪುರಿ ಜಗನ್ನಾಥ ದೇವಾಲಯ, ಜಾರ್ಖಂಡ್‌ನ ಬೈದ್ಯನಾಥ ಧಾಮ ಹಾಗೂ ಬಿಹಾರದ ಗಯಾ ಮತ್ತು ಬೋಧಗಯಾಗಳ ದರ್ಶನ ಮುಗಿಸಿದ್ದ ಇವರು, ಅಲ್ಲಿಂದ ಉತ್ತರ ಪ್ರದೇಶದ ವಾರಣಾಸಿಗೆ (ಕಾಶಿ) ಪ್ರಯಾಣಿಸುತ್ತಿದ್ದಾಗ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಯೋ ಮೋರ್ ಬಳಿ ಈ ಅಪಘಾತ ಸಂಭವಿಸಿದೆ.

ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಕತ್ತಲಲ್ಲಿ ಸ್ಪಷ್ಟವಾಗಿ ಕಾಣಿಸದ ಕಾರಣ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆ ಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ತೀವ್ರವಾಗಿ ಜಖಂಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು ಆಂಧ್ರಪ್ರದೇಶದ ನೆಲ್ಲೂರು ಮೂಲದವರಾದ ಸೋಮ ಪದ್ಮ, ಪಶುಪುಲೆಟ್ಟಿ ವೆಂಕಟೇಶ, ಚಾವಡಂ ಹಜ್ರತ್ ಥೀಟಾ ಎಂದು ಗುರುತಿಸಲಾಗಿದೆ. ಹಾಗೂ ಅಪಘಾತದಲ್ಲಿ ಒಟ್ಟು 22 ಮಂದಿ ಗಾಯಗೊಂಡಿದ್ದು, ಈ ಪೈಕಿ 8 ಪ್ರಯಾಣಿಕರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಯಾದ ಅನುಗ್ರಹ ನಾರಾಯಣ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ANMMC) ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸಮೀಪದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರಿಗೆ ಎಲುಬು ಮುರಿತ ಹಾಗೂ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಫಾಸಿಲ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಶೋಕ್ ಕುಮಾರ್ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್‌ನಲ್ಲಿದ್ದವರೆಲ್ಲರೂ ಒಂದೇ ಗ್ರಾಮ ಮತ್ತು ಪರಸ್ಪರ ಪರಿಚಿತರಾಗಿದ್ದರಿಂದ ಇಡೀ ತಂಡ ಪ್ರಸ್ತುತ ತೀವ್ರ ಆಘಾತ ಹಾಗೂ ದುಃಖದಲ್ಲಿದೆ.
ಯಾತ್ರೆಯ ಮಧ್ಯದಲ್ಲೇ ಭೀಕರ ದುರಂತ ಎದುರಿಸಿರುವ ಬದುಕುಳಿದ ಯಾತ್ರಿಕರು ಹಾಗೂ ಮೃತರ ಕುಟುಂಬಸ್ಥರು ತಾಯ್ನಾಡಿನ ಆಂಧ್ರಪ್ರದೇಶ ಸರ್ಕಾರಕ್ಕೆ ತುರ್ತು ನೆರವಿಗಾಗಿ ಮನವಿ ಮಾಡಿದ್ದಾರೆ. ಗಾಯಾಳುಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ, ಮೃತರ ಪಾರ್ಥಿವ ಶರೀರಗಳನ್ನು ಸ್ವಗ್ರಾಮಕ್ಕೆ ಸಾಗಿಸುವ ಸೌಲಭ್ಯ ಹಾಗೂ ನೊಂದ ಕುಟುಂಬಗಳಿಗೆ ಸೂಕ್ತ ಆರ್ಥಿಕ ಪರಿಹಾರ ಒದಗಿಸಿಕೊಡಬೇಕೆಂದು ಅವರು ವಿನಂತಿಸಿದ್ದಾರೆ.


Leave a Reply