ಬೆಂಗಳೂರು: ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ತಮಗೆ ಸಿಕ್ಕ ಖಾತೆಯ ಬಗ್ಗೆ ತೀವ್ರ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿ ಕಾಂಗ್ರೆಸ್ ಪಾಳಯದಲ್ಲಿ ಭೂಕಂಪ ಸೃಷ್ಟಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಅವರ ಬಂಡಾಯದ ಕಥೆ ಕೊನೆಗೂ ಮುಕ್ತಾಯವಾಗಿದೆ. ಕೆಪಿಸಿಸಿ (KPCC) ಕಚೇರಿಯಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರು, “ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದು, ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ” ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಈ ಬಿಕ್ಕಟ್ಟಿನ ಹೊಣೆಯನ್ನು ಬೇರೆಡೆಗೆ ತಳ್ಳಲು ಪ್ರಯತ್ನಿಸಿದರು. “ನಿನ್ನೆಯಿಂದ ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ಈ ವಿಷಯದಲ್ಲಿ ಸಾಕಷ್ಟು ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ರಾಮಲಿಂಗಾರೆಡ್ಡಿ ಅವರು ನಮ್ಮ ಅತ್ಯಂತ ಹಿರಿಯ ಶಾಸಕರು ಮತ್ತು ಹಲವು ಬಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೇವಲ ಒಂದು ಸಣ್ಣ ಮಿಸ್‌ಅಂಡರ್‌ಸ್ಟ್ಯಾಂಡಿಂಗ್‌ನಿಂದಾಗಿ (ಗೊಂದಲದಿಂದ) ಅವರು ರಾಜೀನಾಮೆ ನೀಡಿದ್ದರು. ಈಗ ನಮ್ಮನ್ನು ಭೇಟಿಯಾದ ಅವರು ರಾಜೀನಾಮೆ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ಅವರು ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲೇ ಸಚಿವರಾಗಿ ಸಕ್ರಿಯವಾಗಿ ಮುಂದುವರಿಯಲಿದ್ದಾರೆ” ಎಂದು ಭರವಸೆ ನೀಡಿದರು.

ರಾಮಲಿಂಗಾರೆಡ್ಡಿ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿದ್ದರು. ಆದರೆ ಈ ಬಾರಿ ಸಿಎಂ ಡಿಕೆಶಿ ತಮಗೆ ‘ಬೆಂಗಳೂರು ಅಭಿವೃದ್ಧಿ’ ಖಾತೆಯ ಭರವಸೆ ನೀಡಿದ್ದಾರೆ ಎಂಬ ಕಾರಣಕ್ಕೆ ಅದೇ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಸಂಪುಟ ರಚನೆ ವೇಳೆ ಅವರಿಗೆ ‘ಜಲಸಂಪನ್ಮೂಲ’ ಖಾತೆ ಸಿಕ್ಕಿದ್ದರಿಂದ ಬೇಸರಗೊಂಡು ಅವರು ರಾಜೀನಾಮೆ ನೀಡಿ ತಮಿಳುನಾಡಿಗೆ ತೆರಳಿದ್ದರು.
ಬೆಂಗಳೂರಿಗೆ ಮರಳಿದ ನಂತರ ಸಿಎಂ ಡಿಕೆಶಿ ಅವರೊಂದಿಗೆ ನಡೆದ 20 ನಿಮಿಷಗಳ ಪ್ರಾಥಮಿಕ ಮಾತುಕತೆ ವಿಫಲವಾಗಿತ್ತು. “ಈ ಹಿಂದೆ ಮಾತು ಕೊಟ್ಟಂತೆ ನಡೆದುಕೊಳ್ಳಿ” ಎಂದು ರೆಡ್ಡಿ ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಇಂದು ಖಾಸಗಿ ಹೋಟೆಲ್‌ನಲ್ಲಿ ಉಸ್ತುವಾರಿ ಸುರ್ಜೇವಾಲ ಅವರು ರೆಡ್ಡಿ ಅವರೊಂದಿಗೆ ಮಹತ್ವದ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ಸುರ್ಜೇವಾಲ ಅವರು, “ಸರ್ಕಾರ ಮತ್ತು ಪಕ್ಷಕ್ಕೆ ನಿಮ್ಮ ಅಗತ್ಯವಿದೆ, ಅಸಮಾಧಾನ ಬೇಡ. ಸಹಕಾರ ಖಾತೆ ಬೇಡವೆಂದರೆ ವಸತಿ ಮತ್ತು ಮುಜರಾಯಿ ಎರಡೂ ಖಾತೆಗಳನ್ನು ಒಟ್ಟಿಗೆ ತೆಗೆದುಕೊಳ್ಳಿ” ಎಂಬ ಹೊಸ ಬಂಪರ್ ಆಫರ್ ನೀಡಿದ್ದಾರೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಅವರು ಈ ವಸತಿ ಹಾಗೂ ಮುಜರಾಯಿ ಖಾತೆಗಳ ಆಫರ್‌ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆಯಾದರೂ, ಅವರಿಗೆ ಹೊಸ ಖಾತೆ ಸಿಗಲಿದೆಯೇ ಅಥವಾ ಹಳೆಯ ಜಲಸಂಪನ್ಮೂಲದಲ್ಲೇ ಇರಲಿದ್ದಾರೆಯೇ ಎಂಬ ಬಗ್ಗೆ ಸುರ್ಜೇವಾಲ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿಲ್ಲ.


Leave a Reply