Shocking Theft | ಶೌಚಾಲಯದ ಕಿಟಕಿ ಮೂಲಕ ನುಗ್ಗಿ ಚಿನ್ನ ಕದ್ದಿದ್ದ ಮೂವರು ಖದೀಮರ ಬಂಧನ, ರೋಚಕ ಕತೆ ಬಿಚ್ಚಿಟ್ಟ ರೌಡಿಶೀಟರ್!

ಹಂಚಿಕೊಳ್ಳಿ

ಬೆಂಗಳೂರು: ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಮೂವರು ಖತರ್ನಾಕ್ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆದರೆ ಬಂಧನದ ಬಳಿಕ ಆರೋಪಿಗಳ ಹಿನ್ನೆಲೆ ಹಾಗೂ ಅವರು ಕಳ್ಳತನಕ್ಕೆ ಸ್ಕೆಚ್ ಹಾಕಿದ ರೋಚಕ ಕತೆಯನ್ನು ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿಶೀಟರ್ ‘ಆರ್ ಎಕ್ಸ್ ನಾಗ’ ಸೇರಿದಂತೆ ಅರ್ಜುನ್ ಅಲಿಯಾಸ್ ರೋಲೆಕ್ಸ್ ಮತ್ತು ರಾಕ್ ಎಂಬುವವರೇ ಈ ಪ್ರಕರಣದಲ್ಲಿ ಸೆರೆಯಾದ ಪ್ರಮುಖ ಆರೋಪಿಗಳಾಗಿದ್ದಾರೆ.

ಕಳೆದ ಮೇ 6 ರಂದು ನಗರತ್ ಪೇಟೆಯ ಪ್ರಸಿದ್ಧ ‘ಆರುಮ್ ಜ್ಯುವೆಲ್ಲರ್ಸ್’ನ ಐದನೇ ಮಹಡಿಯಲ್ಲಿ ಈ ಕಳ್ಳತನ ನಡೆದಿತ್ತು. ಖದೀಮರು ಕಟ್ಟಡದ ಶೌಚಾಲಯದ ಕಿಟಕಿ ಮೂಲಕ ಅತ್ಯಂತ ಚಾಣಾಕ್ಷತನದಿಂದ ಒಳನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಕಳ್ಳತನ ಮಾಡಿ ತಪ್ಪಿಸಿಕೊಳ್ಳುವ ದೃಶ್ಯಗಳು ಸೆರೆಯಾಗಿದ್ದವು.

ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ನಗರತ್ ಪೇಟೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರ ಮೇಲೆ ಅನುಮಾನ ಮೂಡಿದೆ. ತಕ್ಷಣವೇ ಶ್ರೀರಾಮಪುರ ನಿವಾಸಿಗಳಾದ ಈ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿಯ ಸತ್ಯ ಹೊರಬಿದ್ದಿದೆ. ಆರೋಪಿಗಳು ಕೇವಲ ಶೌಚಾಲಯ ಕ್ಲೀನ್ ಮಾಡುತ್ತಿರಲಿಲ್ಲ, ಬದಲಾಗಿ ನಗರತ್ ಪೇಟೆಯ ಚಿನ್ನದ ಅಂಗಡಿಗಳ ವಾಶ್‌ರೂಮ್ ಹಾಗೂ ಚರಂಡಿಗಳಿಂದ ಬರುವ ಕೊಳಚೆ ನೀರನ್ನು ಶೇಖರಿಸಿ ಅದರಲ್ಲಿ ಕೊಚ್ಚಿಹೋಗುತ್ತಿದ್ದ ಸಣ್ಣ ಸಣ್ಣ ವೇಸ್ಟೇಜ್ ಚಿನ್ನದ ಕಣಗಳನ್ನು ಹುಡುಕಿ ಮಾರುವುದು ಇವರ ಕಾಯಕವಾಗಿತ್ತು. ದಿನಾಲೂ ಕಷ್ಟಪಟ್ಟು ಚಿನ್ನದ ಕಣ ಹುಡುಕುವ ಬದಲಿಗೆ ಒಂದೇ ಸಲ ದೊಡ್ಡ ಮಟ್ಟದಲ್ಲಿ ಹಣ ಮಾಡಬೇಕೆಂದು ಜ್ಯುವೆಲ್ಲರಿ ಶಾಪ್‌ನ ಶೌಚಾಲಯದ ಕಿಟಕಿಯ ಮೂಲಕವೇ ನುಗ್ಗಿ ಚಿನ್ನದ ಗಟ್ಟಿ ಕದ್ದಿದ್ದರು. ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 84 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds