ಲೆಕ್ಕಪತ್ರದ ವಿಚಾರದಲ್ಲಿ ಅಪಪ್ರಚಾರ ಬೇಡ: ಶೇರುದಾರರ ನಂಬಿಕೆ ಎಂದು ಹುಸಿ ಮಾಡುದಿಲ್ಲ : ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ  ಸ್ಪಷ್ಟನೆ’

ಹಂಚಿಕೊಳ್ಳಿ

ಕಳಚೆ: ಲೆಕ್ಕಪತ್ರದಲ್ಲಿ ಕೆಲವು ಮೊತ್ತಗಳನ್ನು ದೃಢೀಕರಣ ಪತ್ರವಿಲ್ಲದೆ ದಾಖಲಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಪರವಾಗಿ ಸ್ಪಷ್ಟೀಕರಣ ನೀಡಲಾಗಿದೆ.

ಐದು ಮಂದಿ ಆಡಳಿತ ಮಂಡಳಿ ಸದಸ್ಯರು ಈ ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಶೇರುದಾರರು, ಸದಸ್ಯರು ಹಾಗೂ ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಸುವ ಉದ್ದೇಶದಿಂದ ಸ್ಪಷ್ಟೀಕರಣ ನೀಡಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.

ಸಂಘದ ಬೆಳವಣಿಗೆಯಲ್ಲಿ ಹಿರಿಯ ಸಹಕಾರಿಗಳ ಕೊಡುಗೆ ಮಹತ್ವದ್ದಾಗಿದೆ. ಸಾರ್ವಜನಿಕರು ಹಾಗೂ ಸದಸ್ಯರು ಇಟ್ಟಿರುವ ವಿಶ್ವಾಸದಿಂದ ಕಳಚೆ ಪಟ್ಟಣದಲ್ಲಿ ಶಾಖೆ, ಎಪಿಎಂಸಿಯಲ್ಲಿ ಅಡಿಕೆ ದಲಾಲಿ ವ್ಯವಹಾರಕ್ಕೆ ಸಂಬಂಧಿಸಿದ ಶಾಖೆ ಹಾಗೂ ಜೋಯಿಡಾದಲ್ಲಿ ವ್ಯಾಪಾರ ಕೇಂದ್ರವನ್ನು ನಡೆಸಲು ಸಾಧ್ಯವಾಗಿದೆ. ಹೀಗಾಗಿ ಸಂಘದ ಕುರಿತು ಪರಿಶೀಲಿಸದೆ ಅಥವಾ ಸಂಪೂರ್ಣ ಮಾಹಿತಿ ಪಡೆಯದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಮಾಹಿತಿಯಿಂದ ಸಂಘದ ಹಿತಾಸಕ್ತಿಗೆ ಧಕ್ಕೆಯಾಗಬಹುದು ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

ಸಂಘದ ಪ್ರಕಾರ, ಪ್ರಸ್ತಾಪವಾಗಿರುವ ಲೆಕ್ಕಪತ್ರದ ವಿಷಯ ಹೊಸದಾಗಿ ಉದ್ಭವಿಸಿರುವುದಲ್ಲ. ಈ ಹಿಂದೆ ಕೂಡ ಇದೇ ವಿಚಾರ ಮುಂದುವರಿದಿದ್ದು, ಸಂಬಂಧಿಸಿದ ಇಲಾಖೆಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನೊಂದಿಗೆ ಹಲವು ವರ್ಷಗಳಿಂದ ಪತ್ರ ವ್ಯವಹಾರ ನಡೆಸಲಾಗಿದೆ. 2016ರಿಂದಲೇ ಬರಬೇಕಾದ ಬಡ್ಡಿ ಮೊತ್ತಕ್ಕೆ ಸಂಬಂಧಿಸಿ ಕೆಡಿಸಿಸಿ ಬ್ಯಾಂಕ್‌ಗೆ ಮನವಿ ಹಾಗೂ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿ 2016ರ ಜನವರಿ 16ರಂದು ಸಹಾಯಕ ನಿಬಂಧಕರು ಸಹಕಾರ ಕಾಯ್ದೆಯ ಕಲಂ 64ರಡಿ ತನಿಖೆಗೆ ಆದೇಶಿಸಿದ್ದು, ವಿಚಾರಣಾಧಿಕಾರಿಗಳು ಮೇ 31ರಂದು ವರದಿ ಸಲ್ಲಿಸಿದ್ದರು. ನಂತರ ಇಲಾಖೆಗೆ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಸಂಘ ತಿಳಿಸಿದೆ.

ಅದೇ ರೀತಿ 2017ರ ಆಗಸ್ಟ್ 8ರಂದು ಕಲಂ 65(ಬಿ)ರಡಿ ಮತ್ತೊಂದು ತನಿಖೆಗೆ ಆದೇಶಿಸಲಾಗಿದ್ದು, 2002-03ರಿಂದ 2016ರವರೆಗಿನ ಬಡ್ಡಿ ರಿಯಾಯಿತಿಗೆ ಸಂಬಂಧಿಸಿದ ವಿಚಾರ ಪರಿಶೀಲನೆಗೊಂಡಿದೆ. ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ನೀಡಿದ ವರದಿಯ ಆಧಾರದ ಮೇಲೆ ಅಗತ್ಯ ಹೊಂದಾಣಿಕೆ ಜಮಾ-ಖರ್ಚು ಮಾಡಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿ ವರ್ಷ ಅಗತ್ಯ ದೃಢೀಕರಣ ಪತ್ರ ನೀಡುವಂತೆ ಕೆಡಿಸಿಸಿ ಬ್ಯಾಂಕ್‌ಗೆ ಪತ್ರ ವ್ಯವಹಾರ ನಡೆಸಿದ್ದರೂ ಇದುವರೆಗೆ ಅಂತಹ ಪತ್ರ ಬಂದಿಲ್ಲ ಎಂದು ಸಂಘ ಹೇಳಿದೆ. ಇದೇ ವೇಳೆ 2024ರ ಜನವರಿ 1ರಿಂದ ಮಾರ್ಚ್ 31ರವರೆಗಿನ ತ್ರೈಮಾಸಿಕ ಮೇಲ್ವಿಚಾರಣಾ ವರದಿಯನ್ನು 2026ರ ಜನವರಿ 19ರಂದು ಸಂಘಕ್ಕೆ ನೀಡಲಾಗಿದ್ದು, ಸಂಬಂಧಿಸಿದ ಮೊತ್ತಕ್ಕೆ ಸೂಕ್ತ ಹೊಂದಾಣಿಕೆ ಜಮಾ-ಖರ್ಚು ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಫೆಬ್ರವರಿ 16, 2026ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿಷಯ ಚರ್ಚಿಸಿ ಅನುವು ಕಾಯ್ದಿರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಮಾರ್ಚ್ 26ರಂದು ನಡೆದ ಸಭೆಯಲ್ಲಿ ಕೆಲವು ನಿರ್ದೇಶಕರು ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಿದ್ದು, ಅವುಗಳನ್ನು ಸಭೆಯ ಠರಾವಿನಲ್ಲಿ ದಾಖಲಿಸಲಾಗಿದೆ ಎಂದು ಸಂಘ ತಿಳಿಸಿದೆ.

ಆಗಸ್ಟ್ 26ರಂದು ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದ್ದು, ಸದಸ್ಯರ ಒಪ್ಪಿಗೆಯೊಂದಿಗೆ ಸಂಬಂಧಿಸಿದ ಮೊತ್ತವನ್ನು ಹೊಂದಾಣಿಕೆ ಜಮಾ-ಖರ್ಚು ಮಾಡಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಘದ ಪ್ರಕಾರ, ಕೆಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ಬರಬೇಕಾದ ಬಡ್ಡಿ ಮೊತ್ತದಲ್ಲಿ ₹12,26,564 ರಷ್ಟು ರಿಸರ್ವ್ ಫಂಡ್ ಬಡ್ಡಿಯಾಗಿದ್ದು, ₹6,28,110 ಮಾರ್ಚ್ ಅಂತ್ಯದಲ್ಲಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಇರಿಸಿದ್ದ ಠೇವಣಿಗಳ ಮೇಲಿನ ಬಡ್ಡಿ ಮೊತ್ತವಾಗಿದೆ. ರಿಸರ್ವ್ ಫಂಡ್ ಬಡ್ಡಿಯ ₹12,26,564 ಮೊತ್ತವು ಏಪ್ರಿಲ್ 4, 2026ರಂದು ಜಮೆಯಾಗಿರುವುದಾಗಿ ಸಂಘ ತಿಳಿಸಿದೆ.

ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶನ ಹಾಗೂ ಸಂಬಂಧಿತ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದ್ದು, ಲೆಕ್ಕಪತ್ರದ ವಿಚಾರದಲ್ಲಿ ಸದಸ್ಯರು ಹಾಗೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೆ ಸಂಘದ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳ ವಿಶ್ವಾಸವನ್ನು ಉಳಿಸಿಕೊಂಡು ಸಂಘದ ಅಭಿವೃದ್ಧಿಗೆ ಮುಂದೆಯೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *