ಭಟ್ಕಳ, ಸೆ.30: ತಾಲೂಕಿನ ಬೆಳಕೆ ಸಮೀಪದ ಗರಡಿಹಿತ್ಲು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸರು ಶೀಘ್ರವೇ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ದೇವಸ್ಥಾನದ ಬೀಗ ಹಾಗೂ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ದೇವರ ಮೂರ್ತಿಗೆ ಅಲಂಕರಿಸಲಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ವೇಳೆ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಭಟ್ಕಳದ ಹನಿಪಾಬಾದ್ ಪ್ರದೇಶದ 26 ವರ್ಷದ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನಿಂದ ಕಳವು ಮಾಡಿದ್ದ ಆಭರಣಗಳ ಜೊತೆಗೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯವು ಒಂದು ಲಕ್ಷ ರೂಪಾಯಿಗೂ ಅಧಿಕವಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ.
ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಭಟ್ಕಳ ಗ್ರಾಮೀಣ ಪೊಲೀಸರು: ಆರೋಪಿ ಬಂಧನ















Leave a Reply