ನದಿ ಜೋಡಣೆ ಯೋಜನೆಗೆ ಯಲ್ಲಾಪುರದಲ್ಲಿ ಭಾರಿ ಪ್ರತಿರೋಧ: ನ.3ಕ್ಕೆ ಬೃಹತ್ ರಸ್ತೆ ತಡೆ ಚಳವಳಿ!

ಹಂಚಿಕೊಳ್ಳಿ

ಯಲ್ಲಾಪುರ: ನದಿ ಜೋಡಣೆ ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಬೃಹತ್ ರಸ್ತೆ ತಡೆ ಹೋರಾಟದ ಸಿದ್ಧತೆ ಕುರಿತು ರಸ್ತೆ ತಡೆ ಸಂಚಾಲನಾ ಸಮಿತಿಯ ಪೂರ್ವಭಾವಿ ಸಭೆ ಮಂಗಳವಾರ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆ ಹಾಗೂ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಎನ್.ಕೆ. ಭಟ್ಟ, ನದಿ ಉಳಿವಿನ ಹೋರಾಟವನ್ನು ಕೆಲವೇ ತಾಲೂಕುಗಳಿಗೆ ಸೀಮಿತಗೊಳಿಸದೆ ಇಡೀ ಜಿಲ್ಲೆಯ ಜನರನ್ನು ಒಳಗೊಳ್ಳುವಂತೆ ಮಾಡಬೇಕು. ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಭೇದ ಮರೆತು ಜಿಲ್ಲೆಯ ಹಿತಕ್ಕಾಗಿ ಎಲ್ಲರೂ ಒಂದಾಗಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ. ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನದಿ ಜೋಡಣೆ ಯೋಜನೆಯಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕಿದೆ. ನದಿಗಳ ಸಂರಕ್ಷಣೆಗಾಗಿ ಜನರು ಸ್ವಯಂಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ವಾತಾವರಣ ನಿರ್ಮಿಸಬೇಕು ಎಂದರು.

ಜನಪ್ರತಿನಿಧಿಗಳು ಕೇವಲ ಭರವಸೆ ನೀಡುವುದರಿಂದ ಪ್ರಯೋಜನವಿಲ್ಲ. ಯೋಜನೆ ತಡೆಯುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿ ಹೋರಾಟದಲ್ಲಿ ಭಾಗವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹೋರಾಟಕ್ಕೆ ಸ್ಪಂದಿಸುವವರೆಗೆ ರಸ್ತೆ ತಡೆ ಮುಂದುವರಿಸುವ ಕುರಿತು ಸಭೆಯಲ್ಲಿ ನಿರ್ಧಾರ ವ್ಯಕ್ತವಾಯಿತು. ಜಿಲ್ಲೆಯ ಉಳಿವಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನ ಸಂದೇಶ ನೀಡಬೇಕು ಎಂದು ಅವರು ಹೇಳಿದರು.

ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಹೋರಾಟದ ಉದ್ದೇಶವನ್ನು ತಿಳಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ರಸ್ತೆ ತಡೆಗೆ ಕರೆತರುವ ಜವಾಬ್ದಾರಿಯನ್ನು ತಾಲೂಕು ಸಂಚಾಲಕರು ಮತ್ತು ಪ್ರಮುಖರಿಗೆ ವಹಿಸಲಾಯಿತು. ಪಟ್ಟಣದಲ್ಲಿಯೂ ಜನ ಸಂಪರ್ಕಕ್ಕಾಗಿ ಪ್ರತ್ಯೇಕ ಪ್ರಮುಖರ ತಂಡ ರಚಿಸುವ ಕುರಿತು ಚರ್ಚಿಸಲಾಯಿತು.

ಹೋರಾಟದ ಖರ್ಚು-ವೆಚ್ಚ ನಿರ್ವಹಣೆಗೆ ಆರ್ಥಿಕ ಸಮಿತಿ, ಪ್ರಚಾರ ಕಾರ್ಯಕ್ಕಾಗಿ ಮಾಧ್ಯಮ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ರಸ್ತೆ ತಡೆ ಹೋರಾಟದ ಸಿದ್ಧತೆ ಮತ್ತು ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು.

ಸಭೆಯಲ್ಲಿ ರಾಘವೇಂದ್ರ ಭಟ್ಟ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಎಂ.ಆರ್. ಹೆಗಡೆ ತಾರೆಹಳ್ಳಿ, ರವಿ ಹೆಗಡೆ, ಶ್ರೀರಾಮ ಲಾಲಗುಳಿ, ನಾರಾಯಣ ಸುರ್ಗಿಮನೆ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ವಿ.ಟಿ. ಹೆಗಡೆ, ಕೆ.ಟಿ. ಹೆಗಡೆ, ಎಂ.ಕೆ. ಭಟ್ಟ ಯಡಳ್ಳಿ, ಭಾಸ್ಕರ ಸಿದ್ದಿ, ಮಹೇಶ ಕುಣಬಿ, ಸಂತೋಷ ಭಟ್ಟ ಹಳವಳ್ಳಿ, ವಿನೋದ ಭಟ್ಟ, ರಘುಪತಿ ಹೆಗಡೆ, ಸುಬ್ಬಣ್ಣ ಉದ್ದಾಬೈಲ, ಎನ್.ಜಿ. ಹೆಗಡೆ ಭಟ್ರಕೇರಿ, ನಾರಾಯಣ ಭಟ್ಟ ಶಿರವಳ್ಳಿ, ನಾರಾಯಣ ಹೆಗಡೆ ಕಲ್ಲೇಶ್ವರ, ದತ್ತಾತ್ರಯ ಹೆಗಡೆ ಕಣ್ಣಿಪಾಲ್, ಪುರಂದರ ನಾಯ್ಕ, ರಘುಪತಿ ಕಂಪ್ಲಿ, ರಾಘು ಭಟ್ಟ ಸುಂಕಸಾಳ ಸೇರಿದಂತೆ ಹಲವರು ಸಲಹೆ-ಸೂಚನೆ ನೀಡಿದರು.

ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸಭೆಯನ್ನು ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *