ರಾಜೀನಾಮೆ ನೀಡಬೇಕಾದದ್ದು ಸಂಸದರಲ್ಲ, ಶಾಸಕರು: ಅನಂತಮೂರ್ತಿ ಹೆಗಡೆ ಆಗ್ರಹ

ಹಂಚಿಕೊಳ್ಳಿ

ಸಿದ್ದಾಪುರ: ಗೆಜೆಟ್ ನೋಟಿಫಿಕೇಶನ್ ಹೊರಬಂದು ಒಂದು ವರ್ಷ ಕಳೆದಿದ್ದರೂ ಮನೆ ಹಾಗೂ ಜಾಗದ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.

ಕಾನಸೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ‘ನಮ್ಮ ಮನೆ–ನಮ್ಮ ಹಕ್ಕು’ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನೆ ತೆರವುಗೊಳಿಸುವುದು ಹಾಗೂ ತೆರಿಗೆ ಹಣ ಸ್ವೀಕರಿಸದಂತೆ ಸೂಚಿಸಿರುವುದು ಸರ್ಕಾರದ ನಿರ್ಧಾರವಾಗಿದ್ದರೆ, ಅದರ ಹೊಣೆಗಾರಿಕೆಯನ್ನು ಸ್ಥಳೀಯ ಶಾಸಕರು ವಹಿಸಬೇಕಾಗುತ್ತದೆ ಎಂದು ಹೇಳಿದರು.

ಸರ್ಕಾರದ ತಪ್ಪು ನಿರ್ಧಾರಕ್ಕೆ ಶಾಸಕರು ಜವಾಬ್ದಾರಿ ಹೊತ್ತುಕೊಂಡು ರಾಜೀನಾಮೆ ನೀಡಬೇಕೆ ಹೊರತು ಸಂಸದರನ್ನು ಹೊಣೆ ಮಾಡುವುದು ಸರಿಯಲ್ಲ. ಸ್ಥಳೀಯ ಶಾಸಕರು ಅಸಹಾಯಕತೆಯ ಧಾಟಿಯಲ್ಲಿ ಹೇಳಿಕೆ ನೀಡುತ್ತಿರುವುದು ಕಂಡುಬರುತ್ತಿದೆ ಎಂದು ಟೀಕಿಸಿದರು.

ಬಡವರ ಒಂದು ಮನೆಯನ್ನಾದರೂ ತೆರವುಗೊಳಿಸಲು ಮುಂದಾದರೆ ಬಿಜೆಪಿ ಮೌನವಾಗಿರುವುದಿಲ್ಲ. ಬಡವರ ಮನೆಗಳ ವಿಚಾರದಲ್ಲಿ ಅನ್ಯಾಯವಾದರೆ ಹೋರಾಟ ನಡೆಸಲಾಗುವುದು. ಈಗಾಗಲೇ ಸಂಸದರು ಕೂಡ ಬಡವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪಂಚಾಯಿತಿ ಮಟ್ಟದಲ್ಲೇ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಬರಬಹುದು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧವೂ ವಾಗ್ದಾಳಿ ನಡೆಸಿದ ಅನಂತಮೂರ್ತಿ ಹೆಗಡೆ, ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಒಂದು ರೀತಿಯಲ್ಲಿ ನೋಡಿಕೊಂಡು, ಚುನಾವಣೆ ಮುಗಿದ ಬಳಿಕ ಅತಿಕ್ರಮಣದಾರರೆಂದು ಪರಿಗಣಿಸಲಾಗುತ್ತಿದೆ ಎಂದು ಟೀಕಿಸಿದರು.

ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದಾಗಿ ಆರೋಪಿಸಿದ ಅವರು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಲು 15 ದಿನಗಳ ಕಾಲಾವಕಾಶ ನೀಡಬೇಕು. ಯಾವುದೇ ಬಡ ವ್ಯಕ್ತಿಗೆ ಮನೆ ತೆರವುಗೊಳಿಸುವ ನೋಟಿಸ್ ನೀಡದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಿಜೆಪಿ ವತಿಯಿಂದ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘಟಿತ ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಲರಾಮ ನಾಮಧಾರಿ, ಕೃಷ್ಣಮೂರ್ತಿ ಹೆಗಡೆ, ವಿನಾಯಕ ಹೆಗಡೆ, ಎನ್.ವಿ. ಹೆಗಡೆ, ಜಿ.ಜಿ. ದೇವಿಸರ, ನಾಗರಾಜ ಕರಮನೆ, ಗಣೇಶ ಕಾನಸೂರು, ಮನೋಜ್ ಕಾನಸೂರು, ಎನ್.ವಿ. ಹೆಗಡೆ ಮಾದನಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *