ಅಪ್ರಾಪ್ತನಿಗೆ ಸಿಕ್ಕಿತು ‘ರೈಡ್’ ಕಿಕ್; ಮಾಲಿಕನಿಗೆ ಸಿಕ್ಕಿತು 25 ಸಾವಿರದ ಕೋರ್ಟ್ ‘ಶಾಕ್’ .. ಯಲ್ಲಾಪುರಲ್ಲಿ ನಡೆದ ಘಟನೆ ಓದಿ ಈ ವರದಿ

ಹಂಚಿಕೊಳ್ಳಿ

ಯಲ್ಲಾಪುರ: ಅಪ್ರಾಪ್ತ ಬಾಲಕನಿಗೆ ಕಾನೂನು ಬಾಹಿರವಾಗಿ ವಾಹನ ಚಲಾಯಿಸಲು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನದ ಮಾಲೀಕರಿಗೆ  ಯಲ್ಲಾಪುರ ಸಿವಿಲ್ ನ್ಯಾಯಾಲಯವು 25,000 ರೂಪಾಯಿಗಳ ಭಾರಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:
ಹುಬ್ಬಳ್ಳಿಯ ಕಾರವಾರ ರಸ್ತೆಯ ನಿವಾಸಿಯೊಬ್ಬರ  ಸೇರಿದ ‘KA 03/EM-……. ನೋಂದಣಿ ಸಂಖ್ಯೆಯ ವಾಹನವನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದನು. ಅಪ್ರಾಪ್ತರಿಗೆ ವಾಹನ ನೀಡುವ ಮೂಲಕ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯದ ತೀರ್ಪು:
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಯಲ್ಲಾಪುರ  ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಎಸ್. ರವರು ಅಪ್ರಾಪ್ತರ ಕೈಗೆ ವಾಹನ ನೀಡುವುದು ಗಂಭೀರ ಅಪರಾಧ ಎಂದು ಪರಿಗಣಿಸಿದ್ದಾರೆ. ತಪ್ಪಿತಸ್ಥ ವಾಹನ ಮಾಲೀಕನಿಗೆ  25,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಕಳಕಳಿ ಮತ್ತು ಜಾಗೃತಿ:
ಇತ್ತೀಚಿನ ದಿನಗಳಲ್ಲಿ ಪೋಷಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಕರ ಕೈಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ನೀಡುವುದು ಹೆಮ್ಮೆಯ ವಿಷಯ ಎಂಬಂತೆ ನೋಡುತ್ತಿದ್ದಾರೆ. ಆದರೆ, ಚಾಲನಾ ಪರವಾನಗಿ (Driving License) ಇಲ್ಲದ, ರಸ್ತೆ ನಿಯಮಗಳ ಅರಿವಿಲ್ಲದ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಸ್ವತಃ ಅವರ ಜೀವಕ್ಕೆ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಪ್ರಾಣಕ್ಕೂ ಕುತ್ತು ತರುತ್ತಿದ್ದಾರೆ.

ಈ ತೀರ್ಪು ಸಮಾಜಕ್ಕೆ ಒಂದು ಬಲವಾದ ಎಚ್ಚರಿಕೆಯ ಸಂದೇಶವಾಗಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ಅದಕ್ಕೆ ಪೋಷಕರು ಅಥವಾ ವಾಹನದ ಮಾಲೀಕರೇ ನೇರ ಹೊಣೆಯಾಗುತ್ತಾರೆ. ಬರೋಬ್ಬರಿ 25,000 ರೂ. ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿಯೂ ಬರಬಹುದು.

ಆದ್ದರಿಂದ, ಸಾರ್ವಜನಿಕರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಕಾನೂನುಬದ್ಧ ವಯಸ್ಸಾಗುವ ಮುನ್ನ ಹಾಗೂ ಪರವಾನಗಿ ಸಿಗುವ ಮುನ್ನ ಯಾವುದೇ ಕಾರಣಕ್ಕೂ ವಾಹನಗಳನ್ನು ನೀಡಬಾರದು. ಕಾನೂನು ಗೌರವಿಸುವುದು ಮತ್ತು ಮಕ್ಕಳ ಭವಿಷ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.

Leave a Reply

Your email address will not be published. Required fields are marked *