ಬಸ್ ಪ್ರಯಾಣ ದರ ಏರಿಕೆಯ ಭೀತಿಯಲ್ಲಿದ್ದ ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಭರ್ಜರಿ ರಿಲೀಫ್ ನೀಡಿದೆ. ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್ ಟಿಕೆಟ್ ದರವನ್ನು ಗಣನೀಯವಾಗಿ ಏರಿಕೆ ಮಾಡಲು ಸಾರಿಗೆ ನಿಗಮಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡೆಹಿಡಿದಿದ್ದಾರೆ.
ಸಾರ್ವಜನಿಕರ ಮೇಲೆ ಏಕಾಏಕಿ ಆರ್ಥಿಕ ಹೊರೆ ಹೊರಿಸಲು ಸಮ್ಮತಿಸದ ಮುಖ್ಯಮಂತ್ರಿಗಳು, ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಸ್ಪಷ್ಟ ಸೂಚನೆ ನೀಡಿದ್ದಾರೆ. ಇದರಿಂದಾಗಿ ಪ್ರತಿದಿನ ಸರ್ಕಾರಿ ಬಸ್‌ಗಳನ್ನು ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಇತ್ತೀಚೆಗೆ ತೈಲಬೆಲೆ ಏರಿಕೆಯಾದ ಕಾರಣ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಅಂದಾಜು 40 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಬಿಎಂಟಿಸಿ 44% ಹಾಗೂ ಕೆಎಸ್‌ಆರ್‌ಟಿಸಿ 33% ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದವು. ಕಳೆದ ವರ್ಷದ ಜನವರಿಯಲ್ಲಷ್ಟೇ 15% ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿದ್ದರೂ, ಪ್ರಸ್ತುತ ಡೀಸೆಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಮತ್ತೆ ಟಿಕೆಟ್ ದರ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿತ್ತು.
ಆದರೆ, ಈ ಬೃಹತ್ ದರ ಏರಿಕೆ ಬೇಡಿಕೆಗೆ ಒಪ್ಪಿಗೆ ಸೂಚಿಸದ ಸಿಎಂ, ಸಾರಿಗೆ ನಿಗಮಗಳ ಟಿಕೆಟ್ ಹೈಕ್ ಪ್ರಸ್ತಾವನೆಯನ್ನು ಸದ್ಯಕ್ಕೆ ತಳ್ಳಿಹಾಕಿದ್ದಾರೆ. ಹೀಗಾಗಿ ಡೀಸೆಲ್ ದರ ಏರಿಕೆಯಾದರೂ ಸಾರ್ವಜನಿಕರಿಗೆ ಯಾವುದೇ ಹೊರೆಯಾಗುವುದಿಲ್ಲ ಹಾಗೂ ಟಿಕೆಟ್ ದರಗಳು ಎಂದಿನಂತೆಯೇ ಮುಂದುವರಿಯಲಿವೆ.



Leave a Reply