ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (Gruhalakshmi Scheme) ಬಿಗ್ ಅಪ್ಡೇಟ್ ಸಿಕ್ಕಿದೆ. ಇನ್ನು ಮುಂದೆ ಕೇವಲ ರೇಷನ್ ಕಾರ್ಡ್ ಇದ್ದರೆ ಸಾಲದು, ಬದಲಿಗೆ ಮತದಾರರ ಗುರುತಿನ ಚೀಟಿ (Voter ID) ಇದ್ದರೆ ಮಾತ್ರವೇ ಮಾಸಿಕ ₹2,000 ಹಣ ಹಸ್ತಾಂತರವಾಗಲಿದೆ. ಯೋಜನೆ ನವೀಕರಣಗೊಳ್ಳುತ್ತಿದ್ದು, ಪ್ರತಿಯೊಬ್ಬ ಫಲಾನುಭವಿಯೂ ಕಡ್ಡಾಯವಾಗಿ ಮರು ಅರ್ಜಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮನೆ ಬಾಗಿಲಿಗೆ ಬರುವ ಸರ್ಕಾರಿ ಪ್ರತಿನಿಧಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಅವರು ಮಹಿಳೆಯರಿಗೆ ಮನವಿ ಮಾಡಿದ್ದಾರೆ.
ಆದಾಯ ತೆರಿಗೆ ಪಾವತಿಸುವವರು, ಮೃತರಾದವರು ಹಾಗೂ ನಕಲಿ ದಾಖಲೆಗಳನ್ನು ನೀಡಿ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಕಟ್ಟುನಿಟ್ಟಿನ ಪರಿಷ್ಕರಣೆ ನಡೆಸಲಾಗುತ್ತಿದೆ. ಅನರ್ಹರನ್ನು ಪಟ್ಟಿಯಿಂದ ಹೊರಹಾಕಿ, ಕೇವಲ ನೈಜ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸುವುದು ಈ ಮಹತ್ತರ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.

ಹೊಸ ಅರ್ಜಿ ಸಲ್ಲಿಕೆಗೆ ಕರಾರುವಾಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಸರ್ಕಾರದಿಂದಲೇ ವಿಶೇಷ ಪ್ರತಿನಿಧಿಗಳನ್ನು ನಿಯೋಜಿಸಲಾಗುತ್ತಿದೆ. “ಮತದಾರರ ಪಟ್ಟಿಯಲ್ಲಿ ಯಾರ ಹೆಸರು ರದ್ದಾಗುತ್ತದೋ, ಅವರು ಗೃಹಲಕ್ಷ್ಮಿ ಯೋಜನೆಯಿಂದಲೂ ಸ್ವಯಂಚಾಲಿತವಾಗಿ ಅನರ್ಹಗೊಳ್ಳಲಿದ್ದಾರೆ. ಬಿಪಿಎಲ್, ಎಪಿಎಲ್ ಕಾರ್ಡ್ ಜತೆಗೆ ವೋಟರ್ ಐಡಿ ಹೊಂದುವುದು ಇನ್ಮುಂದೆ ಕಡ್ಡಾಯ. ನಮ್ಮ ಪ್ರತಿನಿಧಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ಕೇಳಿದ ಅಗತ್ಯ ದಾಖಲೆ ಮತ್ತು ನಿಖರ ಮಾಹಿತಿಗಳನ್ನು ನೀಡಿ ಸಹಕರಿಸಿ” ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಗೃಹಲಕ್ಷ್ಮಿ ಮಾತ್ರವಲ್ಲದೆ ಗೃಹಜ್ಯೋತಿ ಹಾಗೂ ವೃದ್ಧಾಪ್ಯ ವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳಿಗೂ ಈ ಪರಿಶೀಲನೆ ಅನ್ವಯವಾಗಲಿದೆ.

Leave a Reply