ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದೊಂದಿಗೆ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ 33 ಸ್ಪಿಲ್‌ವೇ ಗೇಟುಗಳನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.
ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಜಂಟಿಯಾಗಿ ಈ ಗೇಟ್‌ಗಳನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮೂರು ರಾಜ್ಯಗಳ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಐತಿಹಾಸಿಕ ಕಾರ್ಯಕ್ರಮದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತ ಮಾಹಿತಿ ಹಂಚಿಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು, ಶಾರದಾ ದೇವಿ, ಹುಲಿಗೆಮ್ಮ, ಹುಚ್ಚರಾಯಸ್ವಾಮಿ, ಅಜ್ಜಯ್ಯ, ಹಂಪಿ ವಿರೂಪಾಕ್ಷ ಹಾಗೂ ರಾಘವೇಂದ್ರ ಸ್ವಾಮಿಯ ಕೃಪೆಯಿಂದಾಗಿ ಈ ಮಹತ್ವದ ಕಾರ್ಯ ಕೈಗೂಡಿದೆ ಎಂದು ಭಕ್ತಿಪೂರ್ವಕವಾಗಿ ಸ್ಮರಿಸಿದ್ದಾರೆ. ತಮ್ಮ ಸರ್ಕಾರವು ಜಲಾಶಯದ 33 ಗೇಟ್‌ಗಳನ್ನು ಒಮ್ಮೆಲೇ ಬದಲಾಯಿಸುವ ದಿಟ್ಟ ತೀರ್ಮಾನ ಕೈಗೊಂಡಿದ್ದು, ಈ ಮೂಲಕ ಮೂರು ರಾಜ್ಯಗಳ ರೈತರ ಹಿತ ಕಾಯುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ತಾನು ಇಂದು ಮುಖ್ಯಮಂತ್ರಿಯಾಗಿದ್ದರೂ ಸದಾ ನಾಡಿನ ಜನತೆಯ ಸೇವಕ ಹಾಗೂ ಬಂಧುವಾಗಿರುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಎರಡನೇ ಬೃಹತ್ ಸಾರ್ವಜನಿಕ ಕಾರ್ಯಕ್ರಮವಾಗಿದೆ.
ಜಲಾಶಯದಲ್ಲಿ 33 ಟಿಎಂಸಿ ನೀರನ್ನು ಉಳಿಸುವ ಕುರಿತು ರೈತ ಮುಖಂಡರು ಸಲ್ಲಿಸಿದ್ದ ಮನವಿಯ ಮೇರೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಒಂದು ತಾಸಿನ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಮಹತ್ವದ ಸಭೆಯಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣ ಹಾಗೂ ಹೂಳೆತ್ತುವ ವಿಚಾರಗಳ ಕುರಿತು ಎಲ್ಲಾ ನಾಯಕರು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಇದರ ಅಧಿಕೃತ ಪ್ರಕಟಣೆಯನ್ನು ಕೇಂದ್ರ ಸಚಿವರು ಶೀಘ್ರದಲ್ಲೇ ಹೊರಡಿಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಒಕ್ಕೂಟ ವ್ಯವಸ್ಥೆ ಮತ್ತು ದೇಶದ ನೀರಾವರಿ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ‘ನಮ್ಮ ನೀರು, ನಮ್ಮ ಹಕ್ಕು’ ಆಶಯದಡಿ ಈ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ದೇಶಕ್ಕೆ ಅನ್ನ ನೀಡುವ ರೈತನಿಗೆ ಸಂಬಳ, ಬಡ್ತಿ, ಪಿಂಚಣಿ, ರಜೆ ಅಥವಾ ನಿವೃತ್ತಿ ಎಂಬುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಬದುಕು ಸಾಗಿಸುತ್ತಿರುವ ರೈತನನ್ನು ಉಳಿಸುವುದು ಹಾಗೂ ಈ ಭಾಗದ ಭತ್ತದ ಕಣಜವನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇದೇ ದೃಢ ಸಂಕಲ್ಪದೊಂದಿಗೆ ಮೂರೂ ರಾಜ್ಯಗಳು ಒಗ್ಗೂಡಿ ರೈತಪರವಾದ ನಿಲುವನ್ನು ತೆಗೆದುಕೊಂಡಿವೆ ಹಾಗೂ ಈ ಭಾಗದ ಕೃಷಿಕರ ಭವಿಷ್ಯವನ್ನು ಭದ್ರಪಡಿಸಲು ಬದ್ಧವಾಗಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.



Leave a Reply