ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಧರ್ಮಸ್ಥಳದ ‘ಬುರುಡೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಥಳಕು ಹಾಕಿಕೊಂಡಿರುವ ಕುರಿತು ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯ ದೂರುದಾರ ಚಿನ್ನಯ್ಯ ಎಂಬಾತ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರು ಉಲ್ಲೇಖವಾಗಿದೆ ಎನ್ನಲಾದ ವದಂತಿಗಳು ಹರಿದಾಡುತ್ತಿವೆ. ಈ ಬೆನ್ನಲ್ಲೇ ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್, “ಇನ್ನೊಂದು ಎರಡು ದಿನಗಳಲ್ಲಿ ನಾನೇ ಖುದ್ದಾಗಿ ಎಲ್ಲ ಅನುಮಾನಗಳಿಗೂ ಅಧಿಕೃತ ಸ್ಪಷ್ಟನೆ ಕೊಡುತ್ತೇನೆ,” ಎಂದು ಪ್ರಕಟಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಸುತ್ತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಬರೆದುಕೊಂಡಿರುವ ಅವರು, “ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದ್ದು, ಲಕ್ಷಾಂತರ ಭಕ್ತರ ನಂಬಿಕೆಗೆ ನೋವುಂಟು ಮಾಡೋ ವಿಚಾರವಾಗಿದೆ. ಆದ್ದರಿಂದ ಈ ಕುರಿತ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವಾಗಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು,” ಎಂದು ಮನವಿ ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ದೊಡ್ಡ ಮಟ್ಟದ ಆರ್ಥಿಕ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ನೀಡಿರುವ ಈ ಹೇಳಿಕೆ ಸದ್ಯ ತೀವ್ರ ಕುತೂಹಲ ಮೂಡಿಸಿದೆ.




Leave a Reply