ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಾಗೂ ಸುಗಮ ಕಾರ್ಯನಿರ್ವಹಣೆಯನ್ನು ಖಾತರಿಪಡಿಸುವ ದೃಷ್ಟಿಯಿಂದ ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳಿಗೆ ಈ ಹಿಂದೆ ಹಂಚಿಕೆ ಮಾಡಲಾಗಿದ್ದ ಜವಾಬ್ದಾರಿಗಳನ್ನು ಇದೀಗ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ಹಾಗೂ ಪ್ರಾದೇಶಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ ಸಿಗುವಂತೆ ಮಾಡಲು ಕರ್ತವ್ಯಗಳನ್ನು ಮರುಹಂಚಿಕೆ ಮಾಡಲಾಗಿದ್ದು, ಈ ಕುರಿತಾದ ಅಧಿಕೃತ ಟಿಪ್ಪಣಿಯನ್ನು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿ ನಾಥ್ ಅವರಿಗೆ ರಾಜ್ಯದ ಅತ್ಯಂತ ಪ್ರಮುಖವಾದ 15 ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಹಣಕಾಸು, ಗೃಹ, ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಲೋಕೋಪಯೋಗಿ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿ-ಬಿಟಿ ಹಾಗೂ ಇಂಧನ ಇಲಾಖೆಗಳು ಇವರ ಸುಪರ್ದಿಯಲ್ಲಿರಲಿವೆ. ಇದರ ಜೊತೆಗೆ ನೀತಿ ನಿರೂಪಣೆಗೆ ಸಂಬಂಧಿಸಿದ ಕಡತಗಳು, ಅಂತರ್-ರಾಜ್ಯ ಜಲ ವಿವಾದಗಳು, ಮೂಲಸೌಕರ್ಯ ಯೋಜನೆಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ಪತ್ರವ್ಯವಹಾರಗಳ ನಿರ್ವಹಣೆಯ ಮಹತ್ವದ ಹೊಣೆಯನ್ನೂ ಇವರೇ ನಿಭಾಯಿಸಲಿದ್ದಾರೆ.

ಮತ್ತೊಂದೆಡೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ರಾಜೇಂದ್ರ ಚೋಳನ್ ಅವರಿಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ, ಸಾರಿಗೆ ಹಾಗೂ ಉನ್ನತ ಮತ್ತು ಶಾಲಾ ಶಿಕ್ಷಣ ಸೇರಿದಂತೆ 14 ಇಲಾಖೆಗಳ ಉಸ್ತುವಾರಿ ವಹಿಸಲಾಗಿದೆ. ಮುಖ್ಯಮಂತ್ರಿಗಳ ಸಚಿವಾಲಯದ ಸಿಬ್ಬಂದಿ ವ್ಯವಹಾರಗಳ ನಿರ್ವಹಣೆ ಕೂಡ ಇವರ ಅಧೀನದಲ್ಲೇ ಇರಲಿದೆ.
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ವಸತಿ, ಕಾರ್ಮಿಕ ಇಲಾಖೆಗಳ ಉಸ್ತುವಾರಿ ಹಾಗೂ ಬೆಂಗಳೂರು ವಿಭಾಗದ ಶಾಸಕರು, ಸಂಸದರ ಅಭಿವೃದ್ಧಿ ಕಾರ್ಯಗಳ ಕುರಿತಾದ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಎಂ.ಎನ್ ಅವರಿಗೆ ನೀಡಲಾಗಿದೆ. ಕರಾವಳಿಯ ಕಾರವಾರ ಹಾಗೂ ಸಂಪೂರ್ಣ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಸಮಸ್ಯೆಗಳ ನಿರ್ವಹಣೆ ಮತ್ತು ಮಹಿಳಾ, ಮಕ್ಕಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಜಂಟಿ ಅಥವಾ ಉಪ ಕಾರ್ಯದರ್ಶಿ-1 ಅವರಿಗೆ ವಹಿಸಲಾಗಿದೆ.
ಆಡಳಿತಾತ್ಮಕ ಜವಾಬ್ದಾರಿಯ ಈ ಸ್ಪಷ್ಟ ಹಂಚಿಕೆಯಿಂದಾಗಿ, ಸ್ಥಳೀಯ ಆಡಳಿತದ ಕುಂದುಕೊರತೆಗಳು ಹಾಗೂ ಜನಶಕ್ತಿ ವೇದಿಕೆಯಂತಹ ಸಾಮಾಜಿಕ ಸಂಘಟನೆಗಳು ಈ ಭಾಗದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಮಸ್ಯೆಗಳನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ತ್ವರಿತವಾಗಿ ಪರಿಹರಿಸಿಕೊಳ್ಳಲು ನೇರ ಸಂಪರ್ಕ ಸೇತುವೆ ಒದಗಿಸಿದಂತಾಗಿದೆ.
ಇದೇ ಮಾದರಿಯಲ್ಲಿ ಜಂಟಿ ಅಥವಾ ಉಪ ಕಾರ್ಯದರ್ಶಿ-2 ಅವರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಮತ್ತು ಕಲಬುರಗಿ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಹಾಗೂ ಮೈಸೂರು ವಿಭಾಗದ ಸಮಸ್ಯೆಗಳನ್ನು ಜಂಟಿ ಅಥವಾ ಉಪ ಕಾರ್ಯದರ್ಶಿ-3 ಅವರು ನಿರ್ವಹಿಸಲಿದ್ದಾರೆ.
ಇನ್ನು ಸಾರ್ವಜನಿಕರ ದೈನಂದಿನ ಕುಂದುಕೊರತೆಗಳು, ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳ ಸಮಸ್ಯೆಗಳ ನಿರ್ವಹಣೆ, ಮುಖ್ಯಮಂತ್ರಿಗಳ ಶಿಷ್ಟಾಚಾರದ ಕರ್ತವ್ಯಗಳು ಮತ್ತು ಸಿಎಂ ಅಧಿಕೃತ ನಿವಾಸದ ಉಸ್ತುವಾರಿಯನ್ನು ವಿಶೇಷ ಕರ್ತವ್ಯಾಧಿಕಾರಿಗೆ ನೀಡಲಾಗಿದೆ. ಈ ಎಲ್ಲ ಅಧಿಕಾರಿಗಳು ಕಡತಗಳನ್ನು ಮುಖ್ಯಮಂತ್ರಿಗಳ ಆದೇಶಕ್ಕಾಗಿ ಮಂಡಿಸುವಾಗ ಅಪರ ಮುಖ್ಯ ಕಾರ್ಯದರ್ಶಿಗಳ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿಯೇ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.



Leave a Reply