ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಾಗೂ ನೂತನ ಸರ್ಕಾರದ ಯೋಜನೆಗಳನ್ನು ವೇಗವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದು, ಇಂದು (ಭಾನುವಾರ) 6 ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಪ್ರಮುಖ ಇಲಾಖೆಗಳಿಗೆ ಹೊಸ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಲಾಗಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ 1994 ರ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿ ಶ್ರೀ ಅಂಜುಮ್ ಪರ್ವೇಜ್ ಅವರನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ. ಹಾಗೆಯೇ, ಬಿಬಿಎಂಪಿಯ ವಿಶೇಷ ಆಯುಕ್ತರಾಗಿರುವ (ಆಡಳಿತ, ಕಂದಾಯ ಮತ್ತು ಐಟಿ) 1998 ರ ಬ್ಯಾಚ್ನ ದಕ್ಷ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ನೂತನವಾಗಿ ಸೃಜಿಸಲಾದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ) ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿ ಸರ್ಕಾರ ಆದೇಶಿಸಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ 2008 ರ ಬ್ಯಾಚ್ನ ಶ್ರೀಮತಿ ದೀಪಾ ಚೋಳನ್ ಅವರನ್ನು ಡಾ. ಪ್ರಸಾದ್ ಎನ್.ವಿ. ಅವರ ಸ್ಥಾನಕ್ಕೆ ಸಾರಿಗೆ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ದೀಪಾ ಚೋಳನ್ ಅವರಿಂದ ತೆರವಾದ ನಗರಾಭಿವೃದ್ಧಿ ಇಲಾಖೆಯ (ಪುರಸಭೆಗಳು) ಕಾರ್ಯದರ್ಶಿ ಸ್ಥಾನಕ್ಕೆ, ಇದುವರೆಗೆ ಯಾವುದೇ ಹುದ್ದೆಯಿಲ್ಲದೆ ನಿರೀಕ್ಷೆಯಲ್ಲಿದ್ದ 2008 ರ ಬ್ಯಾಚ್ನ ಮತ್ತೋರ್ವ ಹಿರಿಯ ಅಧಿಕಾರಿ ಶ್ರೀಮತಿ ಕಾವೇರಿ ಬಿ.ಬಿ. ಅವರನ್ನು ನಿಯೋಜಿಸಲಾಗಿದೆ.
ಇದೇ ವೇಳೆ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿ-ಅಂಶಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದ 2009 ರ ಬ್ಯಾಚ್ನ ಡಾ. ವೆಂಕಟೇಶ್ ಎಂ.ವಿ. ಅವರನ್ನು ಬೆಂಗಳೂರಿನ ಸಹಕಾರ ಸಂಘಗಳ ರಿಜಿಸ್ಟ್ರಾರ್ (Registrar for Co-operative Societies) ಆಗಿ ಖಾಲಿ ಇದ್ದ ಮಹತ್ವದ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಅಲ್ಲದೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ 2013 ರ ಬ್ಯಾಚ್ನ ಡಾ. ಸೆಲ್ವಮಣಿ ಆರ್. ಅವರನ್ನು ಯೋಗೀಶ್ ಎ.ಎಂ. ಅವರ ಸ್ಥಾನಕ್ಕೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


Leave a Reply