ಬೆಂಗಳೂರು: ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆಗಿನ ಮೊದಲ ಸಭೆಯ ಬಳಿಕ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಡಳಿತ ಯಂತ್ರವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳ ನಿರ್ವಹಣೆಗಾಗಿಯೇ ರಾಜ್ಯದಲ್ಲಿ ಹೊಸ ಸಚಿವಾಲಯವನ್ನು ಸ್ಥಾಪಿಸುವುದಾಗಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಜನರ ದೈನಂದಿನ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಈ ಇಲಾಖೆಗೆ ಪ್ರತ್ಯೇಕವಾಗಿ ಹೊಸ ಮಂತ್ರಿಯೊಬ್ಬರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯ ಬಳಕೆಯ ಕುರಿತು ಅವರು ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ಸರ್ಕಾರದ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಸುಮಾರು ಎಂಟು ಸಾವಿರ ಕೋಟಿ ರೂಪಾಯಿಗಳಷ್ಟು ಸಿಎಸ್ಆರ್ ಫಂಡ್ ಖರ್ಚಾಗಬೇಕಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾರ್ಪೊರೇಟ್ ಕಂಪನಿಗಳು ಎಲ್ಲಿ ಮತ್ತು ಹೇಗೆ ಖರ್ಚು ಮಾಡುತ್ತಿವೆ ಎಂಬುದರ ಬಗ್ಗೆ ನಮ್ಮ ಸರ್ಕಾರವು ಇನ್ನು ಮುಂದೆ ತೀವ್ರ ನಿಗಾ ಇಡಲಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ (ಡಿಸಿ) ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, ಆಯಾ ವ್ಯಾಪ್ತಿಯಲ್ಲಿ ಕಂಪನಿಗಳು ಎಲ್ಲಿ ಮತ್ತು ಯಾವ ಯೋಜನೆಗಳಿಗೆ ಹಣವನ್ನು ವಿನಿಯೋಗಿಸುತ್ತಿವೆ ಎಂಬ ನಿಖರ ಮಾಹಿತಿಯನ್ನು ಕಲೆಹಾಕಿ ಸರ್ಕಾರಕ್ಕೆ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಕೇವಲ ಲಾಭದತ್ತ ಗಮನ ಹರಿಸದೆ, ಸಮಾಜಮುಖಿ ಕಾರ್ಯಗಳತ್ತ ಒಲವು ತೋರಬೇಕು ಹಾಗೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಹೊಸ ಶಾಲೆಗಳ ನಿರ್ಮಾಣಕ್ಕೆ ತಮ್ಮ ಸಿಎಸ್ಆರ್ ನಿಧಿಯ ನೆರವನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ.



Leave a Reply