ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕಗೊಳ್ಳಲು ಸಜ್ಜಾಗುತ್ತಿದ್ದಂತೆ, ಆಡಳಿತ ಯಂತ್ರದಲ್ಲೂ ಭಾರಿ ಬದಲಾವಣೆಗಳ ಮುನ್ಸೂಚನೆ ಸಿಗುತ್ತಿದೆ. ಇದರ ಮೊದಲ ಭಾಗವಾಗಿ, ನೂತನ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ (Principal Secretary) ಹಿರಿಯ ಐಎಎಸ್ ಅಧಿಕಾರಿ ಪಿ. ರಾಜೇಂದ್ರ ಚೋಳನ್ ಅವರು ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಯಾರು ಈ ಪಿ.ರಾಜೇಂದ್ರ ಚೋಳನ್?

ರಾಜೇಂದ್ರ ಚೋಳನ್ ಅವರು 2008ರ ಕರ್ನಾಟಕ ಕೆಡರ್‌ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಇ (ಬ್ಯಾಚುಲರ್ ಆಫ್ ಇಂಜಿನಿಯರಿಂಗ್) ಪದವಿ ಪಡೆದಿದ್ದು, ಪ್ರಸ್ತುತ ಗ್ರೇಟರ್ ಬೆಂಗಳೂರು ಅಥಾರಿಟಿಯ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 3, 2025 ರಂದು ಈ ಹುದ್ದೆ ವಹಿಸಿಕೊಂಡಿದ್ದರು.
ದಕ್ಷ ಆಡಳಿತದ ಅನುಭವ: ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಇವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿ (DC), ಸಿಇಒ, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ, ವಿವಿಧ ಇಲಾಖೆಗಳ ವ್ಯವಸ್ಥಾಪಕ ನಿರ್ದೇಶಕರು (MD) ಹಾಗೂ ಕಾರ್ಯದರ್ಶಿಯಾಗಿ ದಕ್ಷತೆಯಿಂದ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರು ಇಂಗ್ಲಿಷ್ ಹಾಗೂ ತಮಿಳು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.
ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚೋಳನ್:
ಬೆಂಗಳೂರು ನಗರಾಭಿವೃದ್ಧಿ ಮತ್ತು ಬಿಬಿಎಂಪಿ ಮರುವಿಂಗಡಣೆ (Greater Bengaluru Authority) ಪ್ರಕ್ರಿಯೆಯ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಅವರು ಹೊಂದಿದ್ದಾಗ ರಾಜೇಂದ್ರ ಚೋಳನ್ ಅವರು ಅತ್ಯಂತ ಆಪ್ತರಾಗಿ ಮತ್ತು ಯಶಸ್ವಿಯಾಗಿ ಕೆಲಸ ಮಾಡಿದ್ದರು. ಹೀಗಾಗಿ, ತಮ್ಮ ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಲು ಮತ್ತು ಬೆಂಗಳೂರು ಅಭಿವೃದ್ಧಿಗೆ ವೇಗ ನೀಡಲು ಡಿಕೆಶಿ ಅವರು ಚೋಳನ್ ಅವರನ್ನು ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತರಲಿದ್ದಾರೆ ಎಂಬ ಮಾತುಗಳು ಐಎಎಸ್ ವಲಯದಲ್ಲಿ ಕೇಳಿಬರುತ್ತಿವೆ. ಜೂನ್ 3 ರ ಪ್ರಮಾಣವಚನದ ಬಳಿಕ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.


Leave a Reply