Gaza ಮೇಲಿನ Israel ದಾಳಿ ಬಗ್ಗೆ ಕೇಂದ್ರದ ಮೌನ ಭಾರತದ ಹಿತಾಸಕ್ತಿಗೆ ಮಾರಕ: ಸೋನಿಯಾ ಗಾಂಧಿ ವಾಗ್ದಾಳಿ

ಹಂಚಿಕೊಳ್ಳಿ

​ಗಾಜಾ ಮಾನವೀಯ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರದ ಮೌನ ಹಾಗೂ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು ಭಾರತದ ನೈತಿಕ ನೆಲೆ ಮತ್ತು ಆಯಕಟ್ಟಿನ ಹಿತಾಸಕ್ತಿಗಳೆರಡಕ್ಕೂ ತೀವ್ರ ಧಕ್ಕೆ ತಂದಿದೆ ಎಂದು ಗುಡುಗಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಕೃತ್ಯಗಳ ಬಗ್ಗೆ ಇಡೀ ಪ್ರಪಂಚವೇ ಕಳವಳ ವ್ಯಕ್ತಪಡಿಸುತ್ತಿದ್ದರೂ, ಮೋದಿ ಸರ್ಕಾರದ ನಿರಂತರ ಮೌನವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಪ್ರಮುಖ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ವಿಶೇಷ ಲೇಖನ ಬರೆದಿರುವ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಸ್ತುತ ವಿದೇಶಾಂಗ ನೀತಿಯು ಪ್ಯಾಲೆಸ್ಟೈನ್, ಇರಾನ್ ಹಾಗೂ ಮಧ್ಯಪ್ರಾಚ್ಯದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಿಂದ ಭಾರತವನ್ನು ದೂರ ಮಾಡಿದೆ. ಇದೇ ವೇಳೆ ನೆರೆಯ ಪಾಕಿಸ್ತಾನವು ಆ ಪ್ರದೇಶದಲ್ಲಿ ಮಧ್ಯವರ್ತಿಯಾಗಿ ಹೊರಹೊಮ್ಮಲು ಕೇಂದ್ರ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಗೂ ಸ್ವಲ್ಪ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದು ಅತ್ಯಂತ ಅಚ್ಚರಿಯ ಹಾಗೂ ಗೊಂದಲಮಯ ಕಾರ್ಯತಂತ್ರದ ನಿರ್ಧಾರವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

​ಗಾಜಾ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಧ್ವನಿ ಎತ್ತುವ ನೈತಿಕ ಹೊಣೆಗಾರಿಕೆ ಭಾರತದ ಮೇಲಿದೆ. ನಿವೃತ್ತ ನ್ಯಾಯಮೂರ್ತಿ ಎಸ್. ಮುರಳೀಧರ್ ನೇತೃತ್ವದ ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ಆಯೋಗದ ವರದಿಗಳನ್ನು ಉಲ್ಲೇಖಿಸಿದ ಅವರು, ಇಸ್ರೇಲ್ ಪಡೆಗಳು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ನರಮೇಧ ನಡೆಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ದಾಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಮುಗ್ಧ ಮಕ್ಕಳು ಬಲಿಯಾಗಿದ್ದು, 44 ಸಾವಿರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲೆಗಳು ಮತ್ತು ಮಕ್ಕಳ ಆಸ್ಪತ್ರೆಗಳು ಸೇರಿದಂತೆ ಮೂಲಸೌಕರ್ಯಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ವರದಿಯ ಅಂಶಗಳನ್ನು ಅವರು ಎತ್ತಿ ತೋರಿಸಿದ್ದಾರೆ.

​2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಹೇಡಿತನದ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಕೃತ್ಯ ಎಂದು ಬಣ್ಣಿಸಿರುವ ಸೋನಿಯಾ ಗಾಂಧಿ, ಅದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯು ವಿಪರೀತ ಕ್ರೌರ್ಯ ಮತ್ತು ಅನಾಗರಿಕತೆಯಿಂದ ಕೂಡಿದೆ ಎಂದಿದ್ದಾರೆ. ಅಮೆರಿಕದ ಬೆಂಬಲದಿಂದ ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿದೆ. ಆದರೆ ಫ್ರಾನ್ಸ್, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲು ಮುಂದಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತಿದೆ.

ಈ ಸಂದರ್ಭದಲ್ಲಿ ಭಾರತ ಮಾತ್ರ ಜಾಗತಿಕ ಅಭಿಪ್ರಾಯದಿಂದ ದೂರ ಸರಿದು ಇಸ್ರೇಲ್ ಜೊತೆ ನಿಕಟವಾಗುತ್ತಿರುವುದು ಹಾಗೂ ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರ ವೈಯಕ್ತಿಕ ಸ್ನೇಹಕ್ಕಾಗಿ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

​ಸೋನಿಯಾ ಗಾಂಧಿ ಅವರ ಈ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಸ್ತುತ ವಿದೇಶಾಂಗ ನೀತಿಯು ನಮ್ಮ ಐತಿಹಾಸಿಕ ಮಿತ್ರರಾಷ್ಟ್ರಗಳನ್ನು ಹೇಗೆ ದೂರ ಮಾಡಿದೆ ಎಂಬುದಕ್ಕೆ ಈ ಲೇಖನ ಕನ್ನಡಿ ಹಿಡಿದಿದೆ ಎಂದಿದ್ದಾರೆ. ಇದೇ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಲೇಖನವನ್ನು ಹಂಚಿಕೊಂಡಿದ್ದು, ಭಾರತವು ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಮರಳಿ ಪಡೆಯಬೇಕು ಮತ್ತು ಗಾಜಾ ವಿಚಾರದಲ್ಲಿ ನೈತಿಕ ಸ್ಪಷ್ಟತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds