ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Tamil Nadu CM Joseph Vijay) ಅವರು ಇಂದು ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಕರ್ನಾಟಕದ ಮೇಕೆದಾಟು (Mekedatu) ಯೋಜನೆಯನ್ನು ವಿರೋಧಿಸುತ್ತಿರುವ ಅವರ ನಿಲುವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಭಾರಿ ಪ್ರತಿಭಟನೆಗೆ ಮುಂದಾಗಿವೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಸಿಎಂ ವಿಜಯ್ ಅವರಿಗೆ ಕೊಲ್ಲೂರಿನಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ದೇವಸ್ಥಾನದ ಸುತ್ತಮುತ್ತ ಹಾಗೂ ಕಾನ್ವಾಯ್ ಸಾಗುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದೆ.
ಇನ್ನು ಈ ವಿವಿಐಪಿ (VVIP) ಭೇಟಿಯ ಕಾರಣದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಇಂದು ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವಿಯ ದರ್ಶನವನ್ನು ತಪ್ಪಿಸುವಂತೆ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಿಎಂ ವಿಜಯ್ ಅವರ ಈ ಪ್ರವಾಸ ಕೇವಲ ಧಾರ್ಮಿಕ ಭೇಟಿಗೆ ಸೀಮಿತವಾಗಿದ್ದು, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ. ಭಕ್ತರಿಗೆ ದೇಗುಲ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ, ಭದ್ರತಾ ಶಿಷ್ಟಾಚಾರದಿಂದಾಗಿ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ಈ 5 ಗಂಟೆಗಳ ಕಾಲ ದೇವಸ್ಥಾನದ ಆವರಣದಲ್ಲಿ ಜನಸಂದಣಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.



Leave a Reply