
ಯಲ್ಲಾಪುರ : ಶಿರಸಿ-ಯಲ್ಲಾಪುರ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮತ್ತು ಹಾಸಣಗಿ ಶಕ್ತಿ ಕೇಂದ್ರದ ವತಿಯಿಂದ ಮಂಚಿಕೇರಿಯ ಮುಖ್ಯ ಬಸ್ ನಿಲ್ದಾಣದ ಎದುರು ಬೃಹತ್ ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆ ಸೋಮವಾರ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ “ಅಧಿಕಾರಿಗಳು ಎಷ್ಟು ದಿನಗಳ ಒಳಗಾಗಿ ರಸ್ತೆ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ ಎಂಬುದನ್ನು ಸ್ಥಳದಲ್ಲೇ ಉತ್ತರಿಸಬೇಕು. ಶಿರಸಿ-ಯಲ್ಲಾಪುರ ಮುಖ್ಯ ರಸ್ತೆಯ ಸಂಪೂರ್ಣ ದುರಸ್ತಿಗೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಲಿಖಿತ ಭರವಸೆ ನೀಡಬೇಕು” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ವೇಳೆ ಅಧಿಕಾರಿಗಳು ಈ ಕಾರ್ಯದಲ್ಲಿ ವಿಫಲವಾದರೆ, ರಸ್ತೆಯ ಪ್ರತಿ ಹೊಂಡಕ್ಕೂ ರಾಜ್ಯ ಸರ್ಕಾರದ ಒಂದೊಂದು ಸಚಿವರ ಹೆಸರುಗಳನ್ನು ಇಟ್ಟು ವಿಭಿನ್ನವಾಗಿ ಪ್ರತಿಭಟಿಸುವುದಾಗಿ ತೀವ್ರ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿನೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ರಸ್ತೆಗಳು ಸರಿಹೋಗಬಹುದು ಎಂದು ಕಾದು ನೋಡಿ ಬೇಸತ್ತು ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು. ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಯಲ್ಲಾಪುರ ತಾಲೂಕಿಗೆ ಎಷ್ಟು ಅನುದಾನ ಬಂದಿದೆ ಎನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲಿ. ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗ ಪೂರ್ಣಗೊಳಿಸಿ, ಈಗಿನ ಸರ್ಕಾರ ತಾವು ಮಾಡಿದ ಅಭಿವೃದ್ಧಿ ಎಂದು ಸುಳ್ಳು ಮಾಹಿತಿ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳಿಂದ ಭರವಸೆ – ಪ್ರತಿಭಟನೆ ಹಿಂದಕ್ಕೆ:
ಸುಮಾರು ಒಂದು ಗಂಟೆಗಳ ಕಾಲ ನಡೆದ ರಸ್ತೆ ತಡೆ ಪ್ರತಿಭಟನೆಯ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರು ಭೇಟಿ ನೀಡಿದರು. “ಒಂದು ವಾರದ ಒಳಗೆ ತಾತ್ಕಾಲಿಕವಾಗಿ ರಸ್ತೆ ಹೊಂಡಗಳನ್ನು ಮುಚ್ಚಲಾಗುವುದು ಹಾಗೂ ಮಳೆ ಮುಗಿದ ತಕ್ಷಣವೇ ಈಗಾಗಲೇ ಮಂಜೂರಿಯಾಗಿರುವ 6 ಕಿಲೋಮೀಟರ್ ರಸ್ತೆಯ ರಿ-ಕೋಟಿಂಗ್ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ” ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಪ್ರಧಾನಕಾರ್ಯದರ್ಶಿ ನಟರಾಜ್ ಗೌಡರ್, ಹಾಸಣಗಿ ಶಕ್ತಿ ಕೇಂದ್ರದ ಅಧ್ಯಕ್ಷ ದಿವಾಕರ ಪೂಜಾರಿ, ಕಂಪ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣಪತಿ ಹೆಗಡೆ, ತಾಲೂಕಾ ಉಪಾಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.















Leave a Reply