
ಯಲ್ಲಾಪುರ: ತಂತ್ರಜ್ಞಾನದ ಯುಗದಲ್ಲಿ ಮನುಷ್ಯ ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ, ಇಲ್ಲೊಬ್ಬ ಅನಾಥ ಅಸ್ವಸ್ಥ ವ್ಯಕ್ತಿಯನ್ನು ಯಲ್ಲಾಪುರದ ಬಿಜೆಪಿ ಮುಖಂಡ ಸೋಮು ನಾಯ್ಕ ಸೇರಿದಂತೆ ಕೆಲವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಯಲ್ಲಾಪುರ ಪಟ್ಟಣದ ದೇವಿ ಮೈದಾನದ ಎದುರಿಗೆ ಇರುವ ನಾಗರಕಟ್ಟೆ ಸಮೀಪ ಕಳೆದ ಕೆಲವು ಸಮಯದಿಂದ ಅನಾಮಿಕ ವ್ಯಕ್ತಿಯೊಬ್ಬರು ತೀರಾ ಅಸ್ವಸ್ಥ ಸ್ಥಿತಿಯಲ್ಲಿ ವಾಸಿಸುತ್ತಿದ್ದರು. ಇದನ್ನು ಗಮನಿಸಿದ ವಿನೋದ ತಳೆಕರ ಎಂಬುವವರು ಸೋಮು ನಾಯ್ಕ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಷಯ ಗಮನಕ್ಕೆ ಬಂದ ಕೂಡಲೆ ಸೋಮು ನಾಯ್ಕ ಮತ್ತು ಸಂಗಡಿಗರು ಬಂದು ವಿಚಾರಿಸಿದಾಗ ಇವರ ಹೆಸರು ಮಹೇಶ ಎಂದು ತಿಳಿದುಬಂದಿದ್ದು, ಇವರು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನವರು ಎನ್ನಲಾಗಿದೆ. ಊಟ, ಉಪಚಾರವಿಲ್ಲದೆ ತೀರಾ ಅಸ್ವಸ್ಥತೆಯಿಂದ ಬಳಲಿ ರಸ್ತೆಯ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹೇಶ ಅವರನ್ನು ಗಮನಿಸಿದ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡರಾದ ಸೋಮೇಶ್ವರ ನಾಯ್ಕ ಮತ್ತು ಬಿಜೆಪಿ ನಗರ ಪ್ರಮುಖರಾದ ವಿನೋದ ತಳೆಕರ, ಹರೀಶ್ ಬೋವಿ , ಕುಮಾರ್ ವಾಲ್ಮೀಕಿ ಮುಂತಾದವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಕೇವಲ ಅನುಕಂಪ ತೋರದೆ, ಮಾನವೀಯ ದೃಷ್ಟಿಯಿಂದ ಅಸ್ವಸ್ಥ ವ್ಯಕ್ತಿಯನ್ನು ಆಟೋ ರಿಕ್ಷಾ ಮೂಲಕ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಿ ಯಲ್ಲಾಪುರದ ನಾಯ್ಕನಕೇರೆ ಸಮಿಪದಲ್ಲಿರುವ ಅನಾಥಾಶ್ರಮಕ್ಕೆ ಅವರನ್ನು ಬಿಟ್ಟು ಬಂದಿದ್ದು, ಅವರ ಮನೆಯವರ ಸಂಪರ್ಕ ಮಾಡಲು ಪ್ರಯತ್ನಿಸಲಾಗುದು ಎಂದು ತಿಳಿಸಿದ್ದಾರೆ.
ಅನಾಥ, ಅಸಹಾಯಕ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿ, ಆತನ ಜೀವ ಉಳಿಸಲು ಶ್ರಮಿಸಿದ ಸೋಮೇಶ್ವರ ನಾಯ್ಕ ಹಾಗೂ ವಿನೋದ ತಳೆಕರ, ಹರೀಶ ಬೋವಿ ,ಕುಮಾರ ವಾಲ್ಮೀಕಿ ಅವರ ಈ ಸಾಮಾಜಿಕ ಮತ್ತು ದಯಾಪರ ಕಾರ್ಯಕ್ಕೆ ಯಲ್ಲಾಪುರ ಪಟ್ಟಣದ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತವಾಗಿದೆ. ಕಷ್ಟದಲ್ಲಿದ್ದವರಿಗೆ ನೆರವಾಗುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ.













Leave a Reply