ಯಲ್ಲಾಪುರ: ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮತ್ತು ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ಸಾರ್ವಜನಿಕರು ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ಗಳು ಮತ್ತೆ ಮಾಲಿಕರ ಕೈ ಸೇರಿವೆ. ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಬಳಸಿಕೊಂಡು ಯಶಸ್ವಿಯಾಗಿ 10 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ನೈಜ ವಾರಸುದಾರರಿಗೆ ಮರಳಿಸುವ ಮೂಲಕ ಸಾರ್ವಜನಿಕರ ಪ್ರಶಂಸೆ ಗೆ ಪಾತ್ರರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳೆದು ಹೋದರೆ ಸಿಗುವುದು ಅಪರೂಪ ಎನ್ನುವ ಕಾಲದಲ್ಲಿ, ಯಲ್ಲಾಪುರ ಪೊಲೀಸರು ತಂತ್ರಜ್ಞಾನವನ್ನು ಅಸ್ತ್ರವಾಗಿಸಿಕೊಂಡಿದ್ದಾರೆ. ಸಾರ್ವಜನಿಕರು ವಿವಿಧ ಸಂದರ್ಭಗಳಲ್ಲಿ ಕಳೆದುಕೊಂಡಿದ್ದ ಸುಮಾರು 2 ಲಕ್ಷ ರೂಪಾಯಿ ಒಟ್ಟು ಮೌಲ್ಯದ 10 ದುಬಾರಿ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲು ಪೊಲೀಸರು ಸತತ ಪ್ರಯತ್ನ ನಡೆಸಿದ್ದರು. ಕಳೆದುಹೋದ ಮೊಬೈಲ್ಗಳ IMEI ಸಂಖ್ಯೆಗಳನ್ನು CEIR ಪೋರ್ಟಲ್ನಲ್ಲಿ ಅಳವಡಿಸಿ, ಅವುಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆಯ ನೆರವಿನಿಂದ ಫೋನ್ಗಳು ಎಲ್ಲಿದ್ದಾವೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ವಾರಸುದಾರರಿಗೆ ಅಧಿಕೃತ ಹಸ್ತಾಂತರ ಪತ್ತೆಯಾದ ಎಲ್ಲಾ 10 ಮೊಬೈಲ್ ಫೋನ್ಗಳನ್ನು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ನೈಜ ಮಾಲೀಕರಿಗೆ ಹಸ್ತಾಂತರಿಸಿದರು. ಕಳೆದುಹೋದ ಮೊಬೈಲ್ಗಳನ್ನು ಮರಳಿ ಪಡೆಯುವ ಭರವಸೆಯನ್ನೇ ಕಳೆದುಕೊಂಡಿದ್ದ ನಾಗರಿಕರು, ತಮ್ಮ ಕೈಗೆ ಫೋನ್ ಸಿಗುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ಪೊಲೀಸರ ಈ ಜನಪರ ಮತ್ತು ತ್ವರಿತ ಕಾರ್ಯಕ್ಷಮತೆಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಮೊಬೈಲ್ ಕಳ್ಳರ ಪಾಲಿಗೆ ಸಿಂಹಸ್ವಪ್ನವಾದ ‘CEIR’ ಪೋರ್ಟಲ್ …
ಕೇಂದ್ರ ದೂರಸಂಪರ್ಕ ಇಲಾಖೆಯು ಜಾರಿಗೆ ತಂದಿರುವ CEIR ಪೋರ್ಟಲ್, ಪ್ರಸ್ತುತ ಮೊಬೈಲ್ ಕಳ್ಳತನ ಮತ್ತು ಕಳೆದುಹೋಗುವ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ಆಸರೆಯಾಗಿದೆ. ಈ ವ್ಯವಸ್ಥೆಯ ವಿಶೇಷತೆ ಫೋನ್ ಸಂಪೂರ್ಣ ಲಾಕ್ ಕಳೆದುಹೋದ ತಕ್ಷಣ ಮಾಲೀಕರು CEIR ನಲ್ಲಿ ದೂರು ನೀಡಿದರೆ, ಆ ಫೋನ್ನಲ್ಲಿ ದೇಶದ ಯಾವುದೇ ಸಿಮ್ ಕಾರ್ಡ್ ಹಾಕಿದರೂ ಅದು ಕೆಲಸ ಮಾಡುವುದಿಲ್ಲ. ಬ್ಲಾಕ್ ಆದ ಫೋನ್ಗೆ ಯಾರಾದರೂ ಬೇರೆ ಸಿಮ್ ಹಾಕಿ ಆನ್ ಮಾಡಲು ಯತ್ನಿಸಿದರೆ ತಕ್ಷಣವೇ ಪೊಲೀಸರಿಗೆ ಲೊಕೇಶನ್ ಸಮೇತ ಅಲರ್ಟ್ ಸಂದೇಶ ರವಾನೆಯಾಗುತ್ತದೆ. ಇದರಿಂದ ಫೋನ್ನಲ್ಲಿರುವ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕಿಂಗ್ ಡೇಟಾ ದುರುಪಯೋಗವಾಗುವುದು ತಪ್ಪುತ್ತದೆ.
ಸಾರ್ವಜನಿಕರಿಗೆ ಪೊಲೀಸರ ಪ್ರಮುಖ ಮನವಿ…
ಮೊಬೈಲ್ ಫೋನ್ಗಳು ಕಳೆದುಹೋದ ತಕ್ಷಣ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಇ-ಕಳೆದುಹೋದ (KSP E-Lost) ಆ್ಯಪ್ ಮೂಲಕ ದೂರು ನೀಡಿ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು. ನಂತರ ಸಾರ್ವಜನಿಕರೇ ನೇರವಾಗಿ CEIR ಪೋರ್ಟಲ್ (ceir.gov.in) ಮೂಲಕ ತಮ್ಮ ಮೊಬೈಲ್ ಬ್ಲಾಕ್ ಮಾಡಬಹುದು. ಇದರಿಂದ ಮೊಬೈಲ್ ಬೇರೆಯವರ ಕೈ ಸೇರಿದರೂ ದುರುಪಯೋಗವಾಗುವುದಿಲ್ಲ ಮತ್ತು ಪೊಲೀಸರಿಗೆ ಅದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ” ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಯಲ್ಲಾಪುರ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯು ಇಲಾಖೆಯ ತಾಂತ್ರಿಕ ದಕ್ಷತೆ ಹಾಗೂ ಸಾರ್ವಜನಿಕರ ಮೇಲಿರುವ ಜವಾಬ್ದಾರಿಗೆ ಸಾಕ್ಷಿಯಾಗಿದೆ. ಮೊಬೈಲ್ ಪೊನ್ ವಾರಸುದಾರರಿಗೆ ವಿತರಿಸುವ ಸಮಯದಲ್ಲಿ ಪಿ. ಎಸ್. ಐ. ರಾಜಶೇಖರ್ ವಂದಿಲಿ, ಮಹಾವೀರ ಕಾಂಬ್ಳೆ ಹಾಗೂ ಸಿಬ್ಬಂದಿಗಳಾದ ಸಂತೋಷ್ ಬಾಲೇರ, ಬಸವರಾಜ್ . ಡಿ. ಕೆ. ಇದ್ದರು.
ಮೊಬೈಲ್ ಕಾಣೆಯಾಗಿ ಅದನ್ನು ಬ್ಲಾಕ್ ಮಾಡದಿದ್ದರೆ ಆಗುವ ಆಪಾಯಗಳೇನು??
ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದು ಮನುಷ್ಯನ 24 ಗಂಟೆಯ ಒಡನಾಡಿ, ಬ್ಯಾಂಕ್ ಖಾತೆ ಎಲ್ಲವನ್ನು ಒಳಗೊಂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಮೊಬೈಲ್ ಫೋನ್ ಕೇವಲ ಕಾಣೆಯಾದರೆ ಅಥವಾ ಎಲ್ಲೋ ಬಿದ್ದು ಹೋದರೆ, ಅದು ಕೇವಲ ಒಂದು ವಸ್ತುವಿನ ನಷ್ಟವಲ್ಲ. ಬದಲಿಗೆ ಇಡೀ ಬದುಕೇ ಅಪರಿಚಿತರ ಕೈಗೆ ಸಿಕ್ಕಂತಾಗುತ್ತದೆ. ಮೊಬೈಲ್ ಫೋನ್ ಕಾಣೆಯಾದಾಗ ಎದುರಾಗುವ ಪ್ರಮುಖ ಅಪಾಯಗಳು ಮತ್ತು ಗಂಭೀರತೆ ಅಷ್ಟಿಷ್ಟಲ್ಲ. ಡಿಜಿಟಲ್ ಜಗತ್ತಿನ ಕೀಲಿ ಕೈ ಕಳೆದುಕೊಂಡಂತೆ!ನಾವು ಮುಂಜಾನೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮಾಡುವ ಪ್ರತಿಯೊಂದು ಕೆಲಸವೂ ಮೊಬೈಲ್ನಲ್ಲೇ ದಾಖಲಾಗಿರುತ್ತದೆ. ಫೋನ್ ಕಾಣೆಯಾದ ತಕ್ಷಣ ಉಂಟಾಗುವ ಗಂಡಾಂತರಗಳು ಸಣ್ಣದೇನಲ್ಲ . ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಫೋನ್ನಲ್ಲೂ ಗೂಗಲ್ ಪೆ ಪೊನ್ ಪೆ ಅಥವಾ ನೆಟ್ ಬ್ಯಾಂಕಿಗ್ ನಂತಹ ಆನ್ ಲೈನ್ ವಹಿವಾಟಿನ ಆ್ಯಪ್ಗಳಿರುತ್ತವೆ. ಫೋನ್ ಸಿಕ್ಕವರು ಸ್ಕ್ರೀನ್ ಲಾಕ್ ಮುರಿಯಲು ಯಶಸ್ವಿಯಾದರೆ ಅಥವಾ ಲಿಂಕ್ ಆಗಿರುವ ಸಿಮ್ ಕಾರ್ಡ್ ಬಳಸಿ ಓಟಿಪಿ (OTP) ಪಡೆದರೆ, ನಿಮ್ಮ ಕಷ್ಟದ ಗಳಿಕೆಯ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುದರಲ್ಲಿ ಸಂಶಯವೇ ಇಲ್ಲ . ಇನ್ನು ನಿಮ್ಮ ಪೊನ್ ನ ಗ್ಯಾಲರಿಯಲ್ಲಿರುವ ಕುಟುಂಬದ ಫೋಟೋಗಳು, ವೈಯಕ್ತಿಕ ವೀಡಿಯೊಗಳು ಮತ್ತು ಪ್ರಮುಖ ದಾಖಲೆಗಳು (ಆಧಾರ್, ಪ್ಯಾನ್ ಕಾರ್ಡ್) ಅಪರಿಚಿತರ ಕೈಗೆ ಸೇರುತ್ತವೆ. ಇವುಗಳನ್ನು ದುರುಪಯೋಗಪಡಿಸಿಕೊಂಡು ಬ್ಲಾಕ್ಮೇಲ್ ಮಾಡುವ ಅಥವಾ ನಿಮ್ಮ ಹೆಸರಿನಲ್ಲೇ ನಕಲಿ ಗುರುತಿನ ಚೀಟಿ ಸೃಷ್ಟಿಸುವ ಅಪಾಯ ಹೆಚ್ಚಿರುತ್ತದೆ. ನಿಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳು ಕಾಣೆಯಾದ ಫೋನ್ನಲ್ಲಿ ಲಾಗ್-ಇನ್ ಆಗಿರುತ್ತವೆ. ಅದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ತುರ್ತು ಹಣದ ಅವಶ್ಯಕತೆ ಇದೆ ಎಂದು ಸುಳ್ಳು ಸಂದೇಶ ಕಳುಹಿಸಿ ವಂಚಿಸುವ ಸಾಧ್ಯತೆ ಇರುತ್ತದೆ. ಕಾಣೆಯಾದ ನಿಮ್ಮ ಫೋನ್ ಅಥವಾ ಸಿಮ್ ಕಾರ್ಡ್ ಅನ್ನು ದುಷ್ಕರ್ಮಿಗಳು ಯಾವುದೇ ಅಪರಾಧ ಕೃತ್ಯಗಳಿಗೆ, ಬೆದರಿಕೆ ಕರೆಗಳಿಗೆ ಅಥವಾ ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಿದರೆ, ಮೊಬೈಲ್ನ ಮೂಲ ಮಾಲೀಕರಾದ ನೀವೇ ಕಾನೂನಿನಡಿಯಲ್ಲಿ ಮೊದಲ ಅಪರಾಧಿಯಾಗಿ ನಿಲ್ಲಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಮೊದಲು ನಾವು ನಮ್ಮ ಪೊನ್ ಕಾಣೆಯಾದ ತಕ್ಷಣ ಪೊಲೀಸ್ ದೂರು ನೀಡುವುದು ಹಾಗೂ ನಂಬರ್ ಬ್ಲಾಕ್ ಮಾಡುವುದು ಸುರಕ್ಷಿತ.
ಮೊಬೈಲ್ ಕಳೆದುಹೋಗಿದೆಯೇ? ಚಿಂತೆ ಬೇಡ: ಯಲ್ಲಾಪುರ ಪೊಲೀಸರ ‘CEIR’ ಅಸ್ತ್ರಕ್ಕೆ ಸಿಕ್ಕಿಬಿಳತ್ತೆ ಫೋನ್ಗಳು!







Leave a Reply