ವಿಜಯನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದ ಭೀಕರ ಘಟನೆಯಲ್ಲಿ ‘ಕಾವೇರಿ ಕ್ರಷರ್’ ನಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ದಾರುಣವಾಗಿ ಸಾ*ವನ್ನಪ್ಪಿದ್ದಾರೆ. ಬಂಡೆ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಕನಿಷ್ಠ ಏಳು ಮಂದಿ ಕಾರ್ಮಿಕರು ಇನ್ನೂ ಬಂಡೆಯ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ಎಂದಿನಂತೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ.
ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ರಷರ್‌ನ ಮೇಲ್ಭಾಗದಲ್ಲಿ ಹಿಟಾಚಿ (Hitachi) ಯಂತ್ರದ ಮೂಲಕ ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಆದರೆ, ಮೇಲೆ ಈ ಕೆಲಸ ನಡೆಯುತ್ತಿರುವಾಗ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮೇಲಿನಿಂದ ಬಂಡೆಗಳು ಜಾರುವ ಕುರಿತು ಯಾವುದೇ ಸುಳಿವು ಇಲ್ಲದಿದ್ದ ಕಾರಣ, ಕೆಳಗೆ ಕೆಲಸ ಮಾಡುತ್ತಿದ್ದ ಅಮಾಯಕ ಕಾರ್ಮಿಕರ ಮೇಲೆ ಬಂಡೆಗಳು ಏಕಾಏಕಿ ಬಂದು ಬಿದ್ದಿವೆ.
ಕ್ರಷರ್‌ನ ಮೇಲುಸ್ತುವಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ವಾಸ್ತವವಾಗಿ, ಬಂಡೆ ತೆರವು ಕಾರ್ಯ ನಡೆಯುವಾಗ ಕ್ರಷರ್‌ನ ಕೆಳಭಾಗದಲ್ಲಿ ಯಾರೂ ಇರಬಾರದಿತ್ತು. ಆದರೆ, ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಿಸಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ದಾರಿ ಮಾಡಿಕೊಟ್ಟಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಮುಂದುವರಿದ ರಕ್ಷಣಾ ಕಾರ್ಯ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಉಳಿದ ಕಾರ್ಮಿಕರು ಆತಂಕಕ್ಕೀಡಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ದುರ್ಘಟನೆಯಲ್ಲಿ ಮೃ*ತಪಟ್ಟವರನ್ನು ಹೊರತೆಗೆಯುವ ಮತ್ತು ಬಂಡೆಯ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ತೀವ್ರಗೊಂಡಿದೆ.
ಭಾರಿ ಗಾತ್ರದ ಬಂಡೆಗಳು ಬಿದ್ದಿರುವುದರಿಂದ ರಕ್ಷಣಾ ಕಾರ್ಯಕ್ಕೆ ಸವಾಲು ಎದುರಾಗಿದೆ. ಇತ್ತ ಕ್ರಷರ್ ಮಾಲೀಕರು ಮತ್ತು ಮೇಲುಸ್ತುವಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Leave a Reply