ಬೆಂಗಳೂರು: ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಕೆ.ಆರ್. ಪುರಂ ವ್ಯಾಪ್ತಿಯ ತ್ರಿವಳಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಎರಡನೇ ಆರೋಪಿಯಾದ ಶ್ವೇತಾಳ ಪ್ರಿಯಕರ ಕೆನತ್ನನ್ನು ಪೊಲೀಸರು ಪಾಂಡಿಚೇರಿ (Pondicherry) ಬಳಿ ವಶಕ್ಕೆ ಪಡೆದಿದ್ದಾರೆ. ಕೊಲೆ ಕೃತ್ಯದ ಬಳಿಕ ಇಬ್ಬರೂ ಬೇರೆ ಬೇರೆಯಾಗಿ ಪಾಂಡಿಚೇರಿ ತಲುಪಿದ್ದರು. ಎರಡು ದಿನಗಳ ಹಿಂದೆಯಷ್ಟೇ ಮುಖ್ಯ ಆರೋಪಿ ಶ್ವೇತಾಳನ್ನು ರೈಲು ನಿಲ್ದಾಣದಲ್ಲಿ ಬಂಧಿಸಿದ್ದ ಕೆ.ಆರ್. ಪುರಂ ಪೊಲೀಸರು, ಇಂದು ಆಕೆಯ ಪ್ರಿಯಕರನನ್ನು ಹೆಡೆಮುರಿ ಕಟ್ಟಿದ್ದಾರೆ.
ವಿಚಾರಣೆ ವೇಳೆ ಶ್ವೇತಾ ಪೊಲೀಸರ ಮುಂದೆ ಕೊಲೆಗೆ ಕಾರಣಗಳನ್ನು ಬಾಯ್ಬಿಟ್ಟಿದ್ದು, ಆಕೆಯ ಹೇಳಿಕೆಗಳು ಬೆಚ್ಚಿಬೀಳಿಸುವಂತಿವೆ. “ತಂದೆ, ತಾಯಿ, ತಂಗಿ ಇದ್ದರೂ ನಾನು ಅನಾಥೆಯಾಗಿದ್ದೆ. ಶಾಲಾ ದಿನಗಳಿಂದಲೂ ತಾಯಿ ಮುತ್ತುಲಕ್ಷ್ಮೀ ನನ್ನ ವಿಷಯದಲ್ಲಿ ತೀವ್ರ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿದ್ದರು. ಡಿಗ್ರಿಯವರೆಗೂ ನನ್ನನ್ನು ಕೈದಿಯಂತೆ ನೋಡಿಕೊಳ್ಳುತ್ತಿದ್ದರು, ನನಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ತಾಯಿಯ ಕಠೋರ ನಡವಳಿಕೆ ನನ್ನ ಮಾನಸಿಕ ಸ್ಥಿತಿಯನ್ನು ಕೆಡಿಸಿತ್ತು. ನನ್ನ ಪರಿಸ್ಥಿತಿ ನೋಡಿ ಶಾಲಾ ಸ್ನೇಹಿತರು ರೇಗಿಸುತ್ತಿದ್ದರು” ಎಂದು ಶ್ವೇತಾ ತನ್ನ ಆಕ್ರೋಶ ಹೊರಹಾಕಿದ್ದಾಳೆ. ಇದೇ ಕಹಿಯಾದ ಸಿಟ್ಟು ಕೊನೆಗೆ ತಂದೆ, ತಾಯಿ ಹಾಗೂ ತಂಗಿಯ ಭೀಕರ ಕೊಲೆಗೆ ದಾರಿ ಮಾಡಿಕೊಟ್ಟಿದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

ಇಡೀ ಕೊಲೆ ಕೃತ್ಯವನ್ನು ತಾನೊಬ್ಬಳೇ ಮಾಡಿರುವುದಾಗಿ ಶ್ವೇತಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. “ಈ ಕೊಲೆಗಳಲ್ಲಿ ಕೆನತ್ ಪಾತ್ರವಿಲ್ಲ” ಎಂದು ಹೇಳುವ ಮೂಲಕ ಆಕೆ ತನ್ನ ಪ್ರಿಯಕರನನ್ನು ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎನ್ನಲಾಗಿದೆ. ಆದರೆ, ಕೊಲೆಯ ಬಳಿಕ ಇಬ್ಬರೂ ಒಟ್ಟಿಗೆ ತಲೆಮರೆಸಿಕೊಂಡು ಪಾಂಡಿಚೇರಿಗೆ ಓಡಿಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯ ಕೆನತ್ನನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು, ಈ ತ್ರಿವಳಿ ಕೊಲೆಯಲ್ಲಿ ಆತನ ಪಾತ್ರ ಎಷ್ಟು ಮತ್ತು ಆತನೇನಾದರೂ ಐಡಿಯಾ ಕೊಟ್ಟಿದ್ದನೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಿದ್ದಾರೆ.




Leave a Reply