ರಾಜ್ಯದ 200 ದಕ್ಷ ಪೊಲೀಸ್ ಅಧಿಕಾರಿಗಳಿಗೆ ಪ್ರತಿಷ್ಠಿತ ‘DG ಮತ್ತು IGP ಶ್ಲಾಘನೀಯ ಪದಕ 2025-26’ ಗರಿ

ಹಂಚಿಕೊಳ್ಳಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ 200 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತಿಷ್ಠಿತ ‘ಡಿಜಿ ಮತ್ತು ಐಜಿಪಿ ಶ್ಲಾಘನೀಯ ಪದಕ 2025-26’ (DG & IGP Commendation Disc 2025-26) ಒಲಿದಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಅವರು ಸೋಮವಾರ(ಜೂನ್ 22) ಈ ಪ್ರಶಸ್ತಿ ವಿಜೇತರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಸಾಧಕ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಗೌರವಿಸಿದ್ದಾರೆ.

ಈ ಬಾರಿಯ ಪುರಸ್ಕೃತರ ಪಟ್ಟಿಯಲ್ಲಿ ಐಜಿಪಿ (IGP) ಶ್ರೇಣಿಯ ಉನ್ನತ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಕಾನ್ಸ್‌ಟೇಬಲ್ (PC) ಹಂತದವರೆಗಿನ ಒಟ್ಟು 200 ಸಾಧಕರಿಗೆ ಈ ಪ್ರತಿಷ್ಠಿತ ಗೌರವ ಸಂದಿದೆ. ಪ್ರಮುಖವಾಗಿ ಬೆಂಗಳೂರು ಕೇಂದ್ರ ಕಚೇರಿ-1 ರ ಐಜಿಪಿ ಸತೀಶ್ ಕುಮಾರ್ ಎನ್., ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್., ಹಾಗೂ ಡಿಐಜಿಪಿಗಳಾದ ಶಂತನು ಸಿನ್ಹಾ, ಡಾ. ಭೀಮಾಶಂಕರ್ ಎಸ್. ಗುಳೇದ್, ಹನುಮಂತರಾಯ ಸೇರಿದಂತೆ ರಾಜ್ಯಾದ್ಯಂತ ವಿವಿಧ ವಿಭಾಗಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಹಲವು ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಈ ಶ್ಲಾಘನೀಯ ಪದಕಕ್ಕೆ ಭಾಜನರಾಗಿದ್ದಾರೆ.

 

ಪದಕ ಧರಿಸುವ ನಿಯಮಗಳ ಬಗ್ಗೆ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಶ್ಲಾಘನೀಯ ಪದಕವನ್ನು (Disc) ಸಮವಸ್ತ್ರದ ಎಡ ಜೇಬಿನ ಮೇಲಿರುವ ರಿಬ್ಬನ್‌ಗಳ ಕೆಳಗೆ ಮತ್ತು ಜೇಬಿನ ಗುಂಡಿಯ (button) ಮೇಲ್ಭಾಗದಲ್ಲಿ ಧರಿಸಬೇಕು. ವಿಶೇಷ ಸಮಾರಂಭದ ಉಡುಗೆಯೊಂದಿಗೆ (ceremonial dress) ಪದಕಗಳನ್ನು ಧರಿಸುವಾಗ, ಈ ಡಿಸ್ಕ್ ಅನ್ನು ಎಡ ಜೇಬಿನ ಗುಂಡಿಯ ಕೆಳಭಾಗದಲ್ಲಿ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಲಾಗಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಪ್ರಶಸ್ತಿ ವಿಜೇತರ ಹೆಸರು ಅಥವಾ ಹುದ್ದೆಯ ವಿವರಗಳಲ್ಲಿ ಯಾವುದೇ ತಿದ್ದುಪಡಿಗಳಿದ್ದರೆ, 25.06.2026 ರೊಳಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿಗದಿತ ನಮೂನೆಯಲ್ಲಿ ಇಮೇಲ್ ಮೂಲಕ ಕಳುಹಿಸಲು ಸೂಚಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಪ್ರತಿಕ್ರಿಯೆ ಬಾರದಿದ್ದರೆ, ಪ್ರಕಟಿಸಿರುವ ಪಟ್ಟಿಯಲ್ಲಿರುವ ವಿವರಗಳೇ ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಡಿಜಿ ಮತ್ತು ಐಜಿಪಿ ಕಚೇರಿಯ ಪ್ರಕಟಣೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

Advertisement


This will close in 3 seconds