ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಹಾಗೂ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಒಂದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದರೂ, ಜೈಲಿನೊಳಗಿನ ಅವರ ದಿನಚರಿ ಸಂಪೂರ್ಣ ವಿಭಿನ್ನವಾಗಿರುವುದು ಗಮನ ಸೆಳೆದಿದೆ.
ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ನಟ ದರ್ಶನ್ ಸುಪ್ರೀಂಕೋರ್ಟ್ ಮೊರೆ ಹೋಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಅಲ್ಲದೆ, ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಗಡುವು ನೀಡಿದೆ. ಒಂದು ವೇಳೆ ಆ ಅವಧಿಯೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಬಳಿಕ ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜಾಮೀನು ನಿರಾಕರಣೆಯಾದ ಬಳಿಕ ನಟ ದರ್ಶನ್ ತೀವ್ರ ನಿರಾಶೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಕನಿಷ್ಠ ಇನ್ನೊಂದು ವರ್ಷದವರೆಗೆ ಜಾಮೀನು ಸಿಗುವ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಅವರು ಜೈಲಿನಲ್ಲಿ ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮಷ್ಟಕ್ಕೆ ತಾವು ಇರುವ ದರ್ಶನ್, ಜೈಲಾಡಳಿತ ವಾರಕ್ಕೊಮ್ಮೆ ನೀಡುವ 3 ರಿಂದ 4 ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ದಿನಚರಿ ಭಿನ್ನವಾಗಿದೆ. ಕಳೆದ ಒಂದು ತಿಂಗಳಿನಿಂದ ಅವರು ಜೈಲಾಡಳಿತದಿಂದ ಬಿಳಿ ಹಾಳೆಗಳು ಹಾಗೂ ಪೆನ್ಸಿಲ್ ಪಡೆದು ಆತ್ಮಚರಿತ್ರೆ ಬರೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ತಮ್ಮ ಬದುಕಿನ ಪಯಣ, ವೈಯಕ್ತಿಕ ಅನುಭವಗಳು ಹಾಗೂ ಜೀವನದಲ್ಲಿ ನಡೆದ ಘಟನೆಗಳನ್ನು ಬರವಣಿಗೆಯ ಮೂಲಕ ದಾಖಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಜೈಲಿನಲ್ಲಿ ಆಯೋಜಿಸಲಾದ ಯೋಗ ದಿನಾಚರಣೆಯ ಅಭ್ಯಾಸ ಕಾರ್ಯಕ್ರಮದಲ್ಲಿಯೂ ಪವಿತ್ರಾ ಗೌಡ ಭಾಗವಹಿಸಿಲ್ಲ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದಲು ತಮ್ಮ ಕೋಣೆಯಲ್ಲೇ ಕುಳಿತು ಆತ್ಮಚರಿತ್ರೆ ಬರೆಯುವ ಕಾರ್ಯದಲ್ಲಿ ನಿರತರಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಜೈಲು ಜೀವನ ಈಗ ವಿಭಿನ್ನ ಕಾರಣಗಳಿಂದಲೇ ಚರ್ಚೆಗೆ ಗ್ರಾಸವಾಗಿದೆ.





Leave a Reply