ವಿಜಯ್ ನಿರ್ಧಾರದಿಂದ ‘ಜನನಾಯಗನ್‌ಗೆ’ ಸಂಕಷ್ಟ? ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗೋದು ಡೌಟ್..!

ಹಂಚಿಕೊಳ್ಳಿ

ಬೆಂಗಳೂರು: ಕೋಲಿವುಡ್‌ನ ಹಿರಿಯ ನಟ ಹಾಗೂ ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣೆ ಹಿಡಿದಿರುವ ದಳಪತಿ ವಿಜಯ್ (Vijay) ಅಭಿನಯದ ಕೊನೆಯ ಚಿತ್ರ ‘ಜನನಾಯಗನ್’ ಸದ್ಯ ಒಂದಿಲ್ಲೊಂದು ವಿವಾದ ಹಾಗೂ ತಾಂತ್ರಿಕ ತೊಡಕುಗಳಿಂದ ಸುದ್ದಿಯಲ್ಲಿದೆ. ವಿಜಯ್ ಮುಖ್ಯಮಂತ್ರಿಯಾದ ಮೇಲೆ ತೆರೆಕಾಣುತ್ತಿರುವ ಮೊದಲ ಹಾಗೂ ಅವರ ಸಿನಿಮಾ ಕೆರಿಯರ್‌ನ ಕೊನೆಯ ಚಿತ್ರ ಇದಾಗಿದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಸೃಷ್ಟಿಯಾಗಿತ್ತು. ಆದರೆ, ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ (Censor Certificate) ಸಿಗುವುದು ವಿಳಂಬವಾಗುತ್ತಿರುವುದರ ನಡುವೆಯೇ, ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಭಾರಿ ದೊಡ್ಡ ಕಂಟಕ ಎದುರಾಗಿದೆ.

ಕನ್ನಡದ ಹೆಸರಾಂತ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರವನ್ನು ಬರೋಬ್ಬರಿ 400 ಕೋಟಿ ರೂಪಾಯಿಗೂ ಅಧಿಕ ಭಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಸಿನಿಮಾ ಬಹುತೇಕ ಸಿದ್ಧವಾಗಿದ್ದರೂ ಸೆನ್ಸಾರ್ ಮಂಡಳಿಯಿಂದ ಇನ್ನು ಯಾವುದೇ ಪ್ರಮಾಣಪತ್ರ ಸಿಕ್ಕಿಲ್ಲ ಹಾಗೂ ಸದ್ಯಕ್ಕೆ ಸಿಗುವ ಲಕ್ಷಣಗಳೂ ಕಾಣುತ್ತಿಲ್ಲ. ಈಗಾಗಲೇ ಕೋಟ್ಯಂತರ ರೂಪಾಯಿ ಮುಂಗಡ ಹಣ ನೀಡಿ ಚಿತ್ರದ ವಿತರಣಾ ಹಕ್ಕುಗಳನ್ನು (Distribution Rights) ಖರೀದಿಸಿರುವ ವಿವಿಧ ರಾಜ್ಯಗಳ ವಿತರಕರು ಈ ಗೊಂದಲದಿಂದಾಗಿ ಭಾರಿ ಆರ್ಥಿಕ ಸಂಕಷ್ಟ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ದಳಪತಿ ವಿಜಯ್ ಅವರಿಗೆ ದಶಕಗಳಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲೂ ‘ಜನನಾಯಗನ್’ ಧೂಳೆಬ್ಬಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ತಮಿಳುನಾಡು ಸಿಎಂ ಆದ ಬೆನ್ನಲ್ಲೇ ವಿಜಯ್ ತೆಗೆದುಕೊಂಡ ರಾಜಕೀಯ ನಿಲುವು ಈಗ ಅವರದ್ದೇ ಚಿತ್ರಕ್ಕೆ ಮುಳುವಾಗಿದೆ. ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ (Mekedatu Project) ವಿಜಯ್ ಸತತವಾಗಿ ಅಡ್ಡಗಾಲು ಹಾಕುತ್ತಿರುವುದು ಕನ್ನಡ ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕರ್ನಾಟಕದ ಪರವಾಗಿಯೇ ತೀರ್ಪು ಬಂದಿದ್ದರೂ, ತಮಿಳುನಾಡು ಸಿಎಂ ವಿಜಯ್ ಅದನ್ನು ಒಪ್ಪಲು ಸಿದ್ಧರಿಲ್ಲ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಖುದ್ದಾಗಿ ಭೇಟಿ ಮಾಡಿದ್ದ ವಿಜಯ್, ಕರ್ನಾಟಕದ ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಮತಿಸಬಾರದು ಮತ್ತು ತಕ್ಷಣವೇ ಅದನ್ನು ತಡೆಯಬೇಕು ಎಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದರು.

ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುತ್ತಿರುವ ತಮಿಳುನಾಡು ಮುಖ್ಯಮಂತ್ರಿಯ ಈ ಕ್ರಮವನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಕರ್ನಾಟಕದ ನೀರಿಗೆ ಕನ್ನ ಹಾಕಲು ಯತ್ನಿಸುತ್ತಿರುವ ನಟನ ಚಿತ್ರವನ್ನು ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಘರ್ಷದಿಂದಾಗಿ ಕರ್ನಾಟಕದಲ್ಲಿ ‘ಜನನಾಯಗನ್’ ಚಿತ್ರದ ಭವಿಷ್ಯ ಸದ್ಯಕ್ಕೆ ಸಂಪೂರ್ಣ ಅಯೋಮಯವಾಗಿದೆ.

Leave a Reply

Your email address will not be published. Required fields are marked *

Advertisement


This will close in 3 seconds