ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ಅಧಿಕೃತವಾಗಿ ಪ್ರವೇಶ ಪಡೆದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ತೀವ್ರಗೊಂಡಿದೆ. ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಜೂನ್ 10 ರವರೆಗೆ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಲಾಗಿದೆ. ಇನ್ನು ಭಾನುವಾರ ಅರ್ಧಕ್ಕೂ ಹೆಚ್ಚಿನ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಪ್ರಸ್ತುತ ಮುಂಗಾರು ಮಳೆಯು ಕರಾವಳಿಯಾದ್ಯಂತ ಸಂಪೂರ್ಣವಾಗಿ ಆವರಿಸಿದ್ದು, ಇದರ ಪ್ರಭಾವದಿಂದ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಿಗೂ ಜೂನ್ 10 ರ ತನಕ ‘ಹಳದಿ ಅಲರ್ಟ್’ (Yellow Alert) ನೀಡಲಾಗಿದೆ.

11 ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ: ಕಾಂಪೌಂಡ್ ಕುಸಿದು ಇಬ್ಬರು ಸಾವು
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕರ್ನಾಟಕ-ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಆಡೂರ್ ಸಂಚಕ್ಕಡವಿನಲ್ಲಿ ಶನಿವಾರ ಭಾರಿ ಮಳೆಯಿಂದಾಗಿ ಕಾಂಪೌಂಡ್ ಗೋಡೆಯೊಂದು ದಿಢೀರನೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಅಬೂಬಕರ್ ಅವರ ಪುತ್ರರಾದ ಮುನ್ಸೀರ್ (9) ಮತ್ತು ಮುಜಮ್ಮಿಲ್ (14) ಎಂಬ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಹಾನ್ (14) ಎಂಬ ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ.
ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಹಾಗೂ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಹಾಗೂ ಸುಬ್ರಹ್ಮಣ್ಯದಲ್ಲೂ ಉತ್ತಮ ಮಳೆಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಹಲವೆಡೆ ವರುಣನ ಅಬ್ಬರ ಮುಂದುವರಿದಿದೆ.
ಹಳೆಯ ಸೇತುವೆ ಧರಾಶಾಹಿ, ಭಟ್ಕಳ ಜಲಾವೃತ
ಉತ್ತರ ಕರ್ನಾಟಕ ಭಾಗದಲ್ಲೂ ಮುಂಗಾರು ಚುರುಕುಗೊಂಡಿದ್ದು, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನ್‌ಚೋಡ್-ನರನಾಳ ರಾಜ್ಯ ಹೆದ್ದಾರಿಯಲ್ಲಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯ ಅತ್ಯಂತ ಹಳೆಯ ಮುಖ್ಯ ಕಾಲುವೆ ಸೇತುವೆಯು ಮಳೆಯ ತೀವ್ರತೆಗೆ ಕುಸಿದು ಬಿದ್ದಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹಲವಾರು ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ತೇರದಾಳ ಹಾಗೂ ವಿಜಯಪುರ ಜಿಲ್ಲೆಯ ಇಂಡಿ ಮತ್ತು ನಾಲತವಾಡದಲ್ಲೂ ಸಾಧಾರಣದಿಂದ ಭಾರಿ ಮಳೆಯಾದ ವರದಿಯಾಗಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ
ಪ್ರಸ್ತುತ ಮುಂಗಾರು ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಮಾತ್ರ ಪ್ರವೇಶಿಸಿದ್ದು, ಇಡೀ ಕರ್ನಾಟಕವನ್ನು ಆವರಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಮುದ್ರದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 60 ಕಿಲೋಮೀಟರ್ ತಲುಪುವ ಸಾಧ್ಯತೆ ಇರುವುದರಿಂದ, ಜೂನ್ 9 ರವರೆಗೆ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಇದಲ್ಲದೆ, ದಕ್ಷಿಣ ಒಳನಾಡಿನ ಕೊಪ್ಪಳ, ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಭಾನುವಾರ ಮತ್ತು ಸೋಮವಾರ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.


Leave a Reply