ಬೆಂಗಳೂರು: ಕಳೆದ 6 ವರ್ಷಗಳಿಂದ ಮುಂದೂಡಿಕೊಂಡು ಬರುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಅಂತೂ ಇಂತೂ ಕಾಲಕೂಡಿಬರುವ ಲಕ್ಷಣಗಳು ಗೋಚರಿಸಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಸ್ಥಳೀಯ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಚುನಾವಣೆ ನಡೆಸಲು ಆಗಸ್ಟ್ 31ರ ಅಂತಿಮ ಗಡುವು ನೀಡಿದೆ. ವಾರ್ಡ್ ವಿಂಗಡಣೆ ಅಂತಿಮಗೊಂಡು ಮೀಸಲಾತಿ ಪ್ರಕಟವಾಗಿದ್ದರೂ, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಜನಗಣತಿಯ ನೆಪವೊಡ್ಡಿ ಡಿಸೆಂಬರ್‌ವರೆಗೆ ಗಡುವು ವಿಸ್ತರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ನ್ಯಾಯಾಲಯವು ಆಗಸ್ಟ್ 31 ರ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿರುವುದರಿಂದ, ರಾಜ್ಯ ಚುನಾವಣಾ ಆಯೋಗವು ಜುಲೈ ಎರಡನೇ ವಾರದಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.

ನೂತನವಾಗಿ ಅಧಿಕಾರಕ್ಕೆ ಬಂದಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಈ ಚುನಾವಣೆಯನ್ನು ತನ್ನ ಪರವಾಗಿ ಒಲಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ. ಸಾರ್ವಜನಿಕ ಮೂಲಸೌಕರ್ಯಗಳ ಗುಣಮಟ್ಟ ಮತ್ತು ಆಡಳಿತದ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿಗಳು ಮೊದಲ ಸಂಪುಟದಲ್ಲೇ ಓಸಿ (OC) ವಿನಾಯಿತಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ಕಸದ ವಿಲೇವಾರಿ ಸಮಸ್ಯೆ ಮಿತಿಮೀರಿದೆ. ಸರ್ಕಾರದ ಹೊಣೆಗಾರಿಕೆಯನ್ನು ಪ್ರದರ್ಶಿಸುವ ಉದ್ದೇಶದಿಂದ, ಮುಂದಿನ 1 ತಿಂಗಳ ಒಳಗೆ ರಸ್ತೆ ದುರಸ್ತಿ ಮತ್ತು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮೂಲಕ ಸ್ಥಳೀಯ ಆಡಳಿತದ ಮೇಲಿನ ಜನರ ವಿಶ್ವಾಸವನ್ನು ಮರಳಿ ಗಳಿಸಲು ಸರ್ಕಾರ ಲೆಕ್ಕಾಚಾರ ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ನಿಯಮಾವಳಿಗಳ ಪ್ರಕಾರ ಮತದಾನದ ದಿನಾಂಕಕ್ಕೂ 45 ದಿನಗಳ ಮುನ್ನ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಇದನ್ನು 30 ದಿನಗಳಿಗೆ ಸೀಮಿತಗೊಳಿಸುವ ಅವಕಾಶವೂ ಆಯೋಗಕ್ಕಿದೆ. ನ್ಯಾಯಾಲಯದ ನಿರ್ದೇಶನದಂತೆ ಜುಲೈ ಎರಡನೇ ವಾರದ ಆಸುಪಾಸಿನಲ್ಲಿ ಅಧಿಸೂಚನೆ ಪ್ರಕಟಿಸಿ, ಆಗಸ್ಟ್ ಕೊನೆಯ ವಾರದಲ್ಲಿ ಮತದಾನ ಪ್ರಕ್ರಿಯೆ ನಡೆಸಲು ಆಯೋಗ ಸಜ್ಜಾಗಿದೆ.
2020 ರ ಸೆಪ್ಟೆಂಬರ್ 10 ಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಅವಧಿ ಮುಕ್ತಾಯವಾಗಿತ್ತು. ಆಡಳಿತಾತ್ಮಕ ವಿಕೇಂದ್ರೀಕರಣದ ಮತ್ತು ಸುಗಮ ಆಡಳಿತದ ಉದ್ದೇಶದಿಂದ ಇದೀಗ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಮರುನಾಮಕರಣ ಮಾಡಿ ಒಟ್ಟು 5 ಪಾಲಿಕೆಗಳನ್ನು ರಚಿಸಲಾಗಿದೆ. ಈ ಮೂಲಕ ಬರೋಬ್ಬರಿ 369 ವಾರ್ಡ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ರಾಜಧಾನಿಯ ಆಡಳಿತ ಯಂತ್ರಕ್ಕೆ ಹೊಸ ಕಾಯಕಲ್ಪ ಸಿಗುವ ನಿರೀಕ್ಷೆಯಿದೆ.




Leave a Reply