
ಸಾಧು ವೇಷದಲ್ಲಿ ಗೋವಾ–ಕರ್ನಾಟಕ ಗಡಿ ದಾಟಲು ಸಂಚು; ಇಬ್ಬರು ಸಹಚರರೂ ವಶಕ್ಕೆ
ಪಣಜಿ/ಯಲ್ಲಾಪುರ: ಗೋವಾದ ಪಣಜಿ ಸಮೀಪದ ಪರ್ವರಿಯಲ್ಲಿರುವ ಮೆಜೆಸ್ಟಿಕ್ ಹೋಟೆಲ್ ಎದುರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಉದ್ಯಮಿ ಹಾಗೂ ‘ಕ್ಯಾಸಿನ ಪ್ರೈಡ್’ ಮತ್ತು ‘ಮೆಜೆಸ್ಟಿಕ್’ ಗ್ರೂಪ್ ಸಂಸ್ಥೆಗಳ ನಿರ್ದೇಶಕ ಶ್ರೀನಿವಾಸ್ ನಾಯಕ್ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಗೋಪಾಲ್ ನಾಯಕ್‌ನನ್ನು ಗೋವಾ ಪೊಲೀಸರು ಗೋವಾ–ಕರ್ನಾಟಕ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಶಾಂತ್ ಹರಿಜನ ಹಾಗೂ ರಾಮದಾಸ್ ಮಿರಾಶಿ ಎಂಬ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ತಿಂಗಳು ನಡೆದಿದ್ದ ಈ ಗುಂಡಿನ ದಾಳಿಯಲ್ಲಿ ಶ್ರೀನಿವಾಸ್ ನಾಯಕ್ ಹಾಗೂ ಅವರ ಭದ್ರತಾ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು. ಹೋಟೆಲ್ ಆವರಣದಲ್ಲಿ ನಡೆದ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿ, ಗುಂಡಿನ ದಾಳಿಗೆ ಸಂಬಂಧಿಸಿದ ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಪರ್ವರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಗೋವಾ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದರು.
ಹಲವು ನಗರಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬೇಟೆ
ಗುಂಡಿನ ದಾಳಿ ಬಳಿಕ ಗೋಪಾಲ್ ನಾಯಕ್ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಬೆಂಗಳೂರು, ಹೈದರಾಬಾದ್, ಕೊಲ್ಕತ್ತಾ ಹಾಗೂ ಜಗನ್ನಾಥಪುರಿ ಸೇರಿದಂತೆ ವಿವಿಧ ನಗರಗಳಲ್ಲಿ ಆಶ್ರಯ ಪಡೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ನಂತರ ಆತ ಮತ್ತೆ ಗೋವಾಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗೋವಾದ ವಿವಿಧ ಪೊಲೀಸ್ ಠಾಣೆಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು.
ಬುಧವಾರ ರಾತ್ರಿ ಸುಮಾರು 10.30ರ ವೇಳೆಗೆ ಗೋವಾ–ಕರ್ನಾಟಕ ಗಡಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಪಾಲ್ ನಾಯಕ್‌ನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಗುರುತು ಮರೆಮಾಚಿಕೊಂಡು ಸಾಧುವಿನ ವೇಷ ಧರಿಸಿ ಗಡಿ ಭಾಗದಿಂದ ತಪ್ಪಿಸಿಕೊಳ್ಳಲು ಆತ ಸಂಚು ರೂಪಿಸಿದ್ದ ಎನ್ನಲಾಗಿದೆ.
ಇಬ್ಬರ ಪಾತ್ರದ ಬಗ್ಗೆಯೂ ತನಿಖೆ
ಗೋಪಾಲ್ ನಾಯಕ್‌ನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಶಾಂತ್ ಹರಿಜನ ಹಾಗೂ ರಾಮದಾಸ್ ನಿರಾಶಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಒಬ್ಬರು ಟ್ಯಾಕ್ಸಿ ಚಾಲಕರಾಗಿದ್ದು, ಮತ್ತೊಬ್ಬರು ಗೋಪಾಲ್ ನಾಯಕ್‌ನ ಪರಿಚಿತ ಎಂದು ತಿಳಿದುಬಂದಿದೆ.
ಆರೋಪಿಗೆ ಆಶ್ರಯ ನೀಡುವುದು, ಸ್ಥಳಾಂತರಿಸಲು ಸಹಕರಿಸುವುದು ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವು ನೀಡುವಲ್ಲಿ ಇವರ ಪಾತ್ರವಿತ್ತೇ ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಯಲ್ಲಾಪುರದ ಶ್ರೀನಿವಾಸ್ ನಾಯಕ್ ಮೇಲೆ ನಡೆದ ದಾಳಿ
ಗೋವಾದ ಪ್ರಮುಖ ಉದ್ಯಮ ಸಂಸ್ಥೆಗಳ ನಿರ್ದೇಶಕರಾಗಿರುವ ಶ್ರೀನಿವಾಸ್ ನಾಯಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು. ಪರ್ವರಿ ಸಮೀಪದ ಮೆಜೆಸ್ಟಿಕ್ ಹೋಟೆಲ್‌ನ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳಲು ಕಾರಿನತ್ತ ತೆರಳುತ್ತಿದ್ದ ವೇಳೆ ಹೊಂಚು ಹಾಕಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಸಿಸಿಟಿವಿ ದೃಶ್ಯಗಳು ತನಿಖೆಗೆ ಪ್ರಮುಖ ಸುಳಿವು ನೀಡಿದ್ದವು. ಘಟನೆಯ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸಿದ್ದರು.
ಶ್ರೀನಿವಾಸ್ ನಾಯಕ್ ಅವರು ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ್ ಅವರ ಹಿರಿಯ ಸಹೋದರರಾಗಿದ್ದಾರೆ. ಇಬ್ಬರೂ ಯಲ್ಲಾಪುರ ಭಾಗದಲ್ಲಿ ಬಡವರು ಹಾಗೂ ಅಶಕ್ತರಿಗೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿರುವುದು ಸ್ಥಳೀಯವಾಗಿ ಗಮನಾರ್ಹವಾಗಿದೆ.
ಪ್ರಮುಖ ಆರೋಪಿಯ ಬಂಧನದಿಂದ ಪ್ರಕರಣದ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದ್ದು, ಗುಂಡಿನ ದಾಳಿಯ ಹಿಂದಿನ ನಿಖರ ಕಾರಣ, ಸಂಚಿನ ಸ್ವರೂಪ ಹಾಗೂ ಇತರರ ಪಾತ್ರದ ಕುರಿತು ಪೊಲೀಸರ ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.















Leave a Reply